ತುಳುನಾಡಿನ ಪರಂಪರೆಯ ಶ್ರೇಷ್ಠ ಆಚರಣೆಗಳಲ್ಲೊಂದಾದ ಭೂತಾರಾಧನೆಯು ಇಂದಿಗೂ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ”ನಂಬಲು ಜಯ ಕೊಡುವ ನಂಬಿದಿರೆ ಅಪಜಯವ ಈಯುವನೆಂಬ ಭಯದ ಭಕ್ತಿಯು ಇರುವುದು ಜನಕೆ” ಎಂಬ ಮಾತಿನಂತೆ ದೇವರ ಭಯ ಇಲ್ಲದವನಿಗೆ ದೈವ ಸರಿಯಾದ ದಾರಿ ತೋರಿಸುತ್ತದೆ ಎಂದು ನಂಬಿಕೆ ಇಂದಿಗೂ ಇದೆ. ದೈವವು ಯಾವುದೇ ಮೇಲು ಕೀಳು ಬಡವ ಬಲ್ಲಿದ ಜಾತಿ ಧರ್ಮ ಎಂಬುದನ್ನು ನೋಡದೆ ಪ್ರತಿಯೊಬ್ಬರಿಗೂ ಅಭಯ ನೀಡುತ್ತದೆ. ಏನೇ ಕಷ್ಟ ಬಂದರು ದೈವ ದ ನುಡಿ ಸಿಕ್ಕರೆ ಸಾಕು ಪರಿಹಾರವಾಗುತ್ತದೆ ಎಂಬ ನಂಬಿಕೆ ಅದೆಷ್ಟೋ ಬಾರಿ ಸತ್ಯವಾಗಿದೆ. ಅದರಂತೆ ದೈವಕ್ಕೆ ಯಾರೇ ಮೋಸ ವಂಚನೆ ಕೆಟ್ಟದನ್ನು ಮಾಡಿದರು ಅಂಥವರಿಗೆ ತಕ್ಕ ಶಾಸ್ತಿಯನ್ನು ಸಹ ಮಾಡುತ್ತದೆ ಎಂಬುದಕ್ಕೆ ಅದೆಷ್ಟೋ ಜ್ವಲಂತ ಸಾಕ್ಷಿಗಳು ನಮ್ಮ ಮುಂದೆ ಇದೆ.
ಅಂತಹ ಕಾರ್ಣಿಕ ದೈವಗಳ ನೇಮ ಕೋಲಾ ಭೂತಾರಾಧನೆಯಲ್ಲಿ ದೈವದ ಮಧ್ಯಸ್ಥನಾಗಿ ದೈವ ನುಡಿ ಹೇಳುವ ಧಾರ್ಮಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಭರತ್ ಭಂಡಾರಿ ಪುತ್ತೂರು ಇವರ ಬಗ್ಗೆ ತುಳುನಾಡಿನಲ್ಲಿ ಪರಿಚಯ ಇಲ್ಲದವರು ಬಹಳ ಕಡಿಮೆ. ತುಳುನಾಡಿನ ಧರ್ಮ ದೈವಗಳಾದ ಕಲ್ಕುಡ ಕಲ್ಲುರ್ಟಿ ನೇಮಗಳಲ್ಲಿ ಹೆಚ್ಚಾಗಿ ದೈವಗಳ ಮಧ್ಯಸ್ಥನಾಗಿ ಸೇವೆ ಸಲ್ಲಿಸುತ್ತಿದ್ದ ಭರತ್ ಭಂಡಾರಿ ಇವರ ನುಡಿಗಳನ್ನು ಕೇಳುವಾಗಲೆಲ್ಲ ಭಕ್ತರ ಮೈಮನ ರೋಮಾಂಚನಗೊಳ್ಳುವುದಂತೂ ಸತ್ಯ.
ಅಂದು ನಮಗಾಗಿ ದೈವ ಸನ್ನಿಧಾನದಲ್ಲಿ ಬಿನ್ನಹವನ್ನು ಸಲ್ಲಿಸುತ್ತಿದ್ದ ದೈವ ಸೇವಾಕಾರ್ಯವನ್ನು ಮಾಡುತ್ತಿದ್ದ ಭರತ್ ಭಂಡಾರಿ ಇವರಿಗೆ ಇಂದು ನಾವು ಅವರಿಗಾಗಿ ಆ ದೈವ ದೇವರಲ್ಲಿ ಪ್ರಾರ್ಥನೆ ಜೊತೆಗೆ ಅವರ ಜೀವ ಉಳಿಸಲು ಸಹಾಯವನ್ನೂ ಮಾಡಬೇಕಾಗಿದೆ. ದೈವಾರಾಧನೆಯಲ್ಲಿ ಮಹತ್ತರ ಕೊಡುಗೆ ನೀಡುತ್ತಿದ್ದ ಮಧ್ಯಸ್ಥ ಭರತ್ ಭಂಡಾರಿ ಇವರು ಇಂದು ಜೀವನ್ಮರಣ ಹೋರಾಟದಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಆಪತ್ಭಾಂಧವರ ಸಹಾಯವನ್ನು ಎದುರು ನೋಡುತ್ತಾ ಮಲಗಿದ್ದಾರೆ.
ಸುಮಾರು 130 ಕೆಜಿ ತೂಕದ ಧೃಢಕಾಯರಾದ ಭರತ್ ಭಂಡಾರಿ ಜಾಂಡೀಸ್ ಕಾಯಿಲೆಗೆ ತುತ್ತಾಗಿ ಇಂದು ಕೇವಲ 40-50 ಕೆಜಿ ತೂಕಕ್ಕೆ ಇಳಿದಿದ್ದು ನೋಡಿದ ನಮ್ಮ ಕಣ್ಣುಗಳಿಗೆ ಶಾಪ ತಟ್ಟಿದಂತೆ ಭಾಸವಾಗುತ್ತದೆ. ಭರತ್ ಭಂಡಾರಿಯವರು ಶಾಲಾ ಕಾಲೇಜು ದಿನಗಳಲ್ಲೇ ಬಹಳ ಪ್ರತಿಭಾವಂತರಾಗಿದ್ದರು. ಪದವಿ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಪಟ್ಟಣದ ಕಡೆ ಮುಖ ಮಾಡುವ ಇಂದಿನ ಯುವ ಜನತೆಯ ನಡುವೆ ಭರತ್ ಭಂಡಾರಿಯವರು ಧಾರ್ಮಿಕ ಸೇವಾ ಕಾರ್ಯದೆಡೆ ಆಕರ್ಷಿತರಾಗಿ ಶಿಕ್ಷಣದ ನಂತರ ದೈವದ ಮಧ್ಯಸ್ಥರಾಗಿ ಜೀವನ ಮುಂದುವರಿಸುತ್ತಾರೆ. ಇದನ್ನೇ ತಮ್ಮ ವೃತ್ತಿಯನ್ನಾಗಿ ಸಹ ಆಯ್ಕೆ ಮಾಡಿಕೊಳ್ಳುತ್ತಾರೆ.
ಯಕ್ಷಗಾನ ಕಲಾವಿದರಾದ ಭರತ್ ಅವರ ತಂದೆಯಂತೆ ಭರತ್ ಸಹ ಸ್ವತಃ ಯಕ್ಷಗಾನ ಬರೆದು ನಿರ್ದೇಶಿಸಿದಂತಹ ಅದ್ಭುತ ಪ್ರತಿಭೆ. ಜೊತೆಗೆ ದೈವಕ್ಕೆ ಸಂಬಂಧ ಪಟ್ಟಂತಹ ಹಲವು ಕಿರುಚಿತ್ರಗಳನ್ನೂ ರಚಿಸಿ ನಿರ್ದೇಶಿಸಿ ಪ್ರಸಂಶೆಯನ್ನು ಪಡೆದಂತವರು. ಇಂತಹ ಬಹುಮುಖ ಪ್ರತಿಭೆ ಇಂದು ನಿಸ್ಸಹಾಯಕ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿದ್ದು ನಮ್ಮೆಲ್ಲರ ಮನ ಕಲಕುವಂತಹ ವಿಚಾರ.

ಪುತ್ತೂರು ತಾಲೂಕಿನ ಬನ್ನೂರು ನಿವಾಸಿಯಾದ ಭರತ್ ಭಂಡಾರಿಯವರಿಗೆ ಮೊದಲು ಸಾಮಾನ್ಯ ಜ್ವರ ಕಾಣಿಸಿದ್ದು, ನಂತರ ಜ್ವರ ಉಲ್ಬಣಿಸಿ ಅದು ಜಾಂಡೀಸ್ ಹಂತ ತಲುಪಿ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಜಾಂಡೀಸ್ ಹಂತ ತಲುಪಿದ ಕಾರಣದಿಂದಾಗಿ ಭರತ್ ಅವರ ಲಿವರ್ ಸಂಪೂರ್ಣ ಡ್ಯಾಮೇಜ್ ಆಗಿದ್ದು ಇವರ ದೇಹ ಸ್ಥಿತಿ ತುಂಬಾನೇ ಕ್ಷೀಣಿಸಿದೆ. ಲಿವರ್ ಮರುಜೋಡಣೆಯಿಂದ (Liver Transplant) ಮಾತ್ರ ಭರತ್ ಚೇತರಿಸಿಕೊಳ್ಳಲು ಸಾಧ್ಯ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಈ ಚಿಕಿತ್ಸೆಗಾಗಿ ಸುಮಾರು 35 ಲಕ್ಷ ಖರ್ಚಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ 3 ಲಕ್ಷ ರೂಪಾಯಿಗಳು ಖರ್ಚಾಗಿದ್ದು ಮಧ್ಯಮ ಕುಟುಂಬದವರಾದ ಭರತ್ ಮನೆಯವರಿಗೆ ಇನ್ನುಳಿದ ಹಣವನ್ನು ಭರಿಸಲು ಸಾಧ್ಯವಾಗದೆ ದಿಕ್ಕು ತೋಚದಂತಾಗಿದೆ.
ಕಳೆದೆರಡು ವರ್ಷಗಳಿಂದ ಕೋರೋಣ ಮಹಾಮಾರಿಯು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರತಿಯೊಬ್ಬರ ಜೀವನವನ್ನು ಕಂಗಾಲಾಗಿಸಿದೆ. ಇದಕ್ಕೆ ಭರತ್ ಅವರ ಕುಟುಂಬವು ಹೊರತಾಗಿಲ್ಲ. ಕೊರೊನದಿಂದಾಗಿ ದೈವ ಸೇವಾ ಕಾರ್ಯ ಇಲ್ಲದೆ ಭರತ್ ಆರ್ಥಿಕವಾಗಿ ಕುಗ್ಗಿದ್ದರು. ಹಾಗೇನೇ ತಂದೆ ಯಕ್ಷಗಾನ ಕಲಾವಿದರಾಗಿದ್ದರಿಂದ ಆರ್ಥಿಕ ಭದ್ರತೆಯು ಇಲ್ಲದೆ ಇರುವುದರಿಂದ ಇಂದು ಭರತ್ ಭಂಡಾರಿ ಅವರ ಚಿಕಿತ್ಸೆಯ ವೆಚ್ಚದ ಉಳಿದ ಹಣದ ಸಂಗ್ರಹಕ್ಕಾಗಿ ಸಹೃದಯಿ ದಾನಿಗಳ ಹಾರೈಕೆ ಮತ್ತು ಸಂಪೂರ್ಣ ನೆರವು ಬೇಕಾಗಿದೆ.
ದೈವದ ಸೇವಾಕಾರ್ಯದಲ್ಲಿ ನಮಗಾಗಿ ಹರಸುತ್ತಿದ್ದ ಭರತ್ ಅವರಿಗೆ ಇಂದು ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುವ ಮೂಲಕ ದೈವದ ಕೃಪೆಗೆ ಪಾತ್ರರಾಗೋಣ. ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳ ಎಂಬ ಹಿರಿಯರ ಮಾತಿನಂತೆ ಈ ಲೇಖನ ತಲುಪಿದ ಪ್ರತಿಯೊಬ್ಬರು ಕೈಲಾದಷ್ಟು ಸಹಾಯ ಮಾಡಿ ಮತ್ತೊಬ್ಬರಿಗೆ ಶೇರ್ ಮಾಡಿ ಅವರಿಗೂ ಸಹಯ ಮಾಡುವಂತೆ ಪ್ರೇರೇಪಿಸಿ, ಭರತ್ ಅವರು ಆದಷ್ಟು ಬೇಗ ಗುಣಮುಖರಾಗಿ ಬರುವಂತೆ ಮಾಡೋಣ.
ಸೂಚನೆ : ಹಣ ಜಮೆ ಮಾಡುವ ಮೊದಲು ಖಾತೆದಾರರ ಹೆಸರನ್ನು ಎರಡು ಮೂರು ಬಾರಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.
ವಿನಂತಿ : ದಾನಿಗಳು ಹಣ ಸಹಾಯ ಮಾಡಿದ ನಂತರ ದಯವಿಟ್ಟು ಪುನಃ ಹಣ ಪಡೆದವರಿಗೆ ಕರೆ ಮಾಡಿ ವಿಚಾರಿಸಬೇಡಿ. ಸಂತ್ರಸ್ತರು ಪ್ರತಿಯೊಬ್ಬರ ಕರೆಗೂ ಉತ್ತರಿಸುವ ಪರಿಸ್ಥಿತಿಯಲ್ಲಿರುವುದಿಲ್ಲವೆಂದು ಅರ್ಥ ಮಾಡಿಕೊಳ್ಳಬೇಕಾಗಿ ವಿನಮ್ರ ವಿನಂತಿ.

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh