ಶಿಕ್ಷಕ ಅಥವಾ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಬಹುದು. ಪ್ರತಿಯೊಬ್ಬರ ಜೀವನದಲ್ಲಿಯೂ ಗುರಿ ಎಷ್ಟು ಮುಖ್ಯವೋ ಗುರುಗಳು ಅಷ್ಟೇ ಮುಖ್ಯ. ಹಲವರ ಜೀವನಗಳಲ್ಲಿ ತಮ್ಮ ಗುರುಗಳು ಬೀರಿದ ಪ್ರಭಾವದಿಂದ ತಾವು ತಮ್ಮ ಜೀವನದ ದಿಕ್ಕನ್ನೇ ಬದಲಿಸಿ ಯಶಸ್ವಿಯಾದ ಉದಾಹರಣೆಗಳಿವೆ.
ಶಿಕ್ಷಕ ಒಬ್ಬ ಶಿಲ್ಪಿ ಇದ್ದ ಹಾಗೆ. ಅವರಿಗೆ ಕೊಟ್ಟಿರುವ ವಿದ್ಯಾರ್ಥಿ ಎಂಬ ಕಲ್ಲನ್ನು ಅಚ್ಚುಕಟ್ಟಾಗಿ ಕೆತ್ತಿ ಅದರಿಂದ ಒಂದು ಹೊಸ ರೂಪವನ್ನು ಹೊರತಂದಾಗ ಮಾತ್ರ ಅವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಆದ್ದರಿಂದ ಅವರು ವಿದ್ಯಾರ್ಜನೆ ನೀಡುವ ಮಕ್ಕಳಿಗೆ ಪ್ರೀತಿತೋರಿ ಅವರನ್ನು ಗೌರವಿಸುವುದು ಒಳಿತಾಗಿದೆ. ಹೀಗೆ ಮುಂದೊಂದು ದಿನ ಅವರು ನವ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುವಾಗ ಅವರ ಮನಸ್ಸಿನಲ್ಲಿ “ಇವನು ನನ್ನ ವಿದ್ಯಾರ್ಥಿ” ಎಂಬ ಸಾರ್ಥಕತೆಯ ಮನೋಭಾವನೆ ಅವರ ಮನಗಳಲ್ಲಿ ಮೂಡಿದರೆ ಅದು ಅವರ ಶಿಕ್ಷಕ ವೃತ್ತಿಯ ಸಾರ್ಥಕತೆ. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾಗಿದೆ. ನಮ್ಮ ಅಜ್ಞಾನದ ಕತ್ತಲನ್ನು ಹೊರಹಾಕಿ ಸುಜ್ಙಾನದ ಬೆಳಕನ್ನು ನೀಡಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ. “ಗುರು” ಎಂಬ ಶಬ್ಧದ ಅರ್ಥವೂ ಇದನ್ನೇ ಹೇಳುತ್ತದೆ. ಅಂಧಃಕಾರವನ್ನು ದೂರಾಗಿಸುವವರೇ ಗುರುಗಳು. ಒಬ್ಬ ಶಿಕ್ಷಕನು ನಮ್ಮಲ್ಲಿರುವ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಶಕ್ತಿಯಾಗಿರುತ್ತಾನೆ., ಶಿಷ್ಯರ ಏಳಿಗೆಯನ್ನು ಸದಾ ಬಯಸುವ ನಮ್ಮ ಇವತ್ತಿನ ಸಾಧಕರ ಹಾದಿಯ ಸಾಧಕ ಗುರುಗಳು, ಸಂಪಾದಕ ಹಾಗೂ ಉತ್ತಮ ಬರಹಗಾರರೂ ಆದ “ನಾರಾಯಣ ರೈ ಕುಕ್ಕುವಳ್ಳಿ”.
ಕುಟುಂಬದ ಪರಿಚಯ:
ಇವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತಿನ ಇರ್ದೆ ಗ್ರಾಮದ ಕುಕ್ಕುವಳ್ಳಿ ಮನೆತನದಲ್ಲಿ. ದಿ| ಶ್ರೀಮತಿ ಗಿರಿಜಾ ಕೆ.ರೈ ಮತ್ತು ದಿ| ಶ್ರೀ ಕರಿಯಪ್ಪ ರೈ ಕಲ್ಲಡ್ಕ ಇವರ ಮೊದಲನೇ ಪುತ್ರನಾಗಿ. ಭಾಸ್ಕರ ರೈ(ಲೇಖಕ,ಉತ್ತಮ ವಾಗ್ಧಿ, ಕಲಾ ಸೇವಕ ಶಿಕ್ಷಕ), ಜತ್ತಪ್ಪ ರೈ(ವ್ಯಂಗ್ಯ ಚಿತ್ರಕಾರ, ಉತ್ತಮ ಶೈಲಿಯ ಬರಹಗಾರ), ಕೊರಗಪ್ಪ ರೈ, ಉಮೇಶ್ ರೈ, ರಮೇಶ್ ರೈ ಕುಕ್ಕುವಳ್ಳಿ(ನಾಟಕ, ಧಾರಾವಾಹಿ ಕಲಾವಿದ) ತಮ್ಮಂದಿರು ಮತ್ತು ವೇದಾವತಿ ಎಸ್ ರೈ, ಶಶಿಕಲಾ ಜಿ ರೈ ಸಹೋದರಿಯರನ್ನು ಹೊಂದಿದ್ದಾರೆ ಮತ್ತು ಇವರ ಪತ್ನಿ ದಿ| ಶ್ರೀಮತಿ ನಾಗರತ್ನಾ ರೈ ಇವರು 2012ರಲ್ಲಿ ನಿಧನರಾದರು. ಕುಕ್ಕುವಳ್ಳಿ ಯವರ ಯಶಸ್ಸಿನಲ್ಲಿ ಇವರ ಪಾತ್ರ ವಿಶೇಷವಾಗಿತ್ತು. ಇವರನ್ನು ಸದಾ ಈಗಲೂ ತನ್ನ ಜೊತೆಗಿದ್ದಂತೆ ನೆನಪಿಸಿಕೊಳ್ಳುತ್ತಾರೆ. ಇವರಿಗೆ ಇಬ್ಬರು ಮಕ್ಕಳು ನಿತಿನ್ ರೈ ಮತ್ತು ನೀನಾ ರಮಾನಾಥ ರೈ. ನೀನಾ ಅವರು ಬಿ.ಎ., ಬಿ.ಎಡ್ ಪದವೀಧರೆ, ಇವರ ಗಂಡ ರಮಾನಾಥ ರೈಯವರು ಪುತ್ತೂರಿನ ನ್ಯಾಯವಾದಿ ಹಾಗೂ ನೋಟರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ನಿತಿನ್‍ರವರು ಕೂಡಾ ಬರಹಗಾರ, ಧಾರಾವಾಹಿ ನಿರ್ದೇಶಕ, ಕಲಾವಿದ ಇವರು ಬೆಂಗಳೂರು ಆದರ್ಶ ವಿದ್ಯಾಲಯದ ಪದವೀಧರರು. ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಇವರಿಗೆ ಕೃಷಿ, ತೋಟಗಾರಿಕೆಯಲ್ಲೂ ತುಂಬಾ ಆಸಕ್ತಿ.. ಇವರ ಪತ್ನಿ ಸಾತ್ವಿಕಾ ರೈ ಇವರು ಎಂಬಿಎ ಪದವೀಧರೆ.
ಶಿಕ್ಷಣ ಮತ್ತು ವೃತ್ತಿ ಜೀವನ
ಇವರು ತನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಬೆಟ್ಟಂಪಾಡಿಯ ನವೋದಯ ಪ್ರೌಢ ಶಾಲೆಯಲ್ಲಿ ಕಲಿತು, ವಿರಾಜಪೇಟೆಯ ಸರ್ವೋದಯ ಟೀಚರ್ಸ್ ಟ್ರೈನಿಂಗ್ ಕಾಲೇಜಿನಿಂದ ಟಿ.ಸಿ.ಹೆಚ್ ತೇರ್ಗಡೆ ಮಾಡಿದರು. ಮುಂದೆ ಮೈಸೂರು ವಿಶ್ವ ವಿದ್ಯಾನಿಲಯದಿಂದ ಖಾಸಗಿಯಾಗಿ ಬಿ.ಎ., ಬಿ.ಎಡ್., ಎಂ.ಎ ಪದವಿ ಪಡೆದುಕೊಂಡರು.
1974ರಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕನಾಗಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟರು. 1976ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾದರು. ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಾದ ಕಡ್ಯ, ಕೊಣಾಜೆ, ಬೆಟ್ಟಂಪಾಡಿ, ಮುಂಡೂರು ಶಾಲೆಗಳಲ್ಲಿ ಸರಕಾರಿ ಸೇವೆ ಆರಂಭಿಸಿದರು. 2000ರಲ್ಲಿ ಭಡ್ತಿ ಪಡೆದು ಪುತ್ತೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿ ಪದವೀಧರ ಸಹ ಶಿಕ್ಷಕರಾಗಿ ಸೇರಿದರು. ಬಳಿಕ ನೂತನವಾಗಿ ಆರಂಭಗೊಂಡ ಇರ್ದೆ, ಉಪ್ಪಳಿಗೆಯ ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾದರು. 2014ರ ಮೇ 31ರಂದು ಸೇವಾ ನಿವೃತ್ತಿ ಹೊಂದಿದರು, ಹೀಗೆ ಸುಮಾರು 40ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ.
ಕುಕ್ಕುವಳ್ಳಿಯವರ ತಂದೆಯವರು ಉತ್ತಮ ದೈವಪ್ರೇಮಿಗಳು, ಕೃಷಿಕರು ಹಾಗೂ ಯಕ್ಷಗಾನ ಅರ್ಥಧಾರಿಗಳು ಮತ್ತು ತಾಯಿ ಆದರ್ಶ ಗೃಹಿಣಿ, ಇವರು ಪಾಡ್ದನ ಪ್ರವೀಣೆಯಾಗಿದ್ದರು. ಇವರ ತಂದೆ ತಾಯಿಯ ಆಶಿರ್ವಾದದಿಂದ ಇವರೊಬ್ಬ ಪ್ರತಿಭಾವಂತ ಶಿಕ್ಷಕ ಮತ್ತು ಬರಹಗಾರರಾಗಿದ್ದಾರೆ. ಇವರ ತಮ್ಮಂದಿರು ಕೂಡಾ ಪ್ರತಿಭಾವಂತ ಕಲಾವಿದರು. ಅಜ್ಜಿಮನೆ ಕುಕ್ಕುವಳ್ಳಿ ಯಲ್ಲಿ ಬಾಲ್ಯದ ದಿನಗಳನ್ನು ಕಳೆದ ಇವರು ತಂದೆ ಮನೆ ಕಲ್ಲಡ್ಕಕ್ಕೆ ಹೋದಾಗ ತಂದೆಯವರು ಹೇಳುತ್ತಿದ್ದ ರಾಮಾಯಣ, ಮಹಾಭಾರತ ಕಥೆಗಳನ್ನು ತನ್ನ ತಮ್ಮಂದಿರುಗಳೊಂದಿಗೆ ಕೇಳಿ ಅದರಿಂದ ಉತ್ತಮ ಜೀವನ ಮೌಲ್ಯಗಳನ್ನು ಕಲಿತು ತನ್ನೊಳಗಿನ ಕಲೆಯನ್ನು ಹೊರಹಾಕಲು ಮುನ್ನುಡಿಯಾಯಿತು. ಇವರು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಮುಂದೆ ಹೆಜ್ಜೆ ಇಟ್ಟರು. ಮನುಷ್ಯನ ಬದುಕಿನಲ್ಲಿ ಕಾಲೆಳೆಯುವುದು, ಅಪಹಾಸ್ಯ ಮಾಡುವುದು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಂತಹ ಸಂದರ್ಭಗಳು ಇವರ ಜೀವನದಲ್ಲಿ ಬಂದಿದ್ದರೂ ಕೂಡ ಅದನ್ನೇ ಪ್ರಗತಿಗೆ ದಾರಿ, ನಮ್ಮ ಬದುಕಿಗೆ ಪ್ರೇರಣೆ ಎಂದು ತಿಳಿದು ಮುನ್ನಡೆದಿದ್ದರು. “ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ”ದಲ್ಲಿ ತರಬೇತಿಗಾಗಿ ಇದ್ದ ಕೆಲಸಮಯದಲ್ಲಿ “ಭಗವಾನ್ ಶ್ರೀ ಸತ್ಯಸಾಯಿ ಬಾಬಾ”ರ ಬೋಧನೆಗಳು ಹಾಗೂ ಮಡಿಯಾಳ ಶ್ರೀ ನಾರಾಯಣ ಭಟ್, ಮುಖ್ಯ ಗುರುಗಳಾದ ಅಳಿಕೆ ಸಂಜೀವ ಶೆಟ್ಟಿ ಇವರುಗಳ ಪ್ರೇರಣೆ ಮತ್ತು ಎಲ್ಲಾ ಸಹದ್ಯೋಗಿ ಬಂಧುಗಳು ಹಾಗೂ ಊರಿನ ಜನರ ಸಹಕಾರ, ಗೌರವ ಇವರ ಮೇಲಿತ್ತು. ಆಗ ಜನರ ಬೆಂಬಲ ಗೌರವದಿಂದ ಜೀವನವು ತುಂಬಾ ಸಂತೋಷವಾಗಿತ್ತು, ನಂತರ ವೃತ್ತಿ ಜೀವನಕ್ಕಾಗಿ ಊರಿಗೆ ಮರಳುತ್ತಾರೆ. ಕೆಲವು ಜನರು ಊರಿನಲ್ಲಿ ಕೆಲಸ ಮಾಡುವುದು ಬೇಡ ಅಂತ ಹೇಳಿದ್ದರೂ ಕೂಡ ತನ್ನ ಊರಿನ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುವುದು ಇವರಿಗೆ ಸಂತೋಷದ ವಿಷಯವಾಗಿತ್ತು. ಈಗ ಎಲ್ಲರಿಗೂ ನಮ್ಮ ಊರಿನ ಮೇಷ್ಟ್ರು ಅನ್ನೋ ಅಭಿಮಾನವಿದೆ.
ರಾಜ್ಯ ಪಠ್ಯ ಪುಸ್ತಕ – ಕನ್ನಡ/ ತುಳು ರಚನಾ ಸಮಿತಿಯ ಸದಸ್ಯನಾಗಿ ಮಕ್ಕಳ ಸಾಹಿತ್ಯ ರಚನೆಯ ನಿರ್ದೇಶಕನಾಗಿ, ತುಳು ಸಾಹಿತ್ಯ ರಚನಾ ಕಮ್ಮಟದ ಸಹ ನಿರ್ದೇಶಕನಾಗಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ, ಹಲವಾರು ಕಥೆ, ಕವನ, ರಸಪ್ರಶ್ನೆ, ಸಂದರ್ಶನ, ಮಕ್ಕಳ ಕಾರ್ಯಕ್ರಮ ಮುಂತಾದವುಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರಗೊಂಡಿದೆ.
“ತರಂಗ”, “ಸುಧಾ”, “ಕರ್ಮವೀರ”, “ಮಲ್ಲಿಗೆ”, “ಕಸ್ತೂರಿ”, “ನಮ್ಮ ಸಂಪರ್ಕ”, “ಬಂಟರವಾಹಿನಿ”, “ಬಾಲಮಂಗಳ”, “ಅಕ್ಷಯ”, “ಮೊಗವೀರ”, “ಪೂವರಿ”, “ಸುದ್ದಿ ಬಿಡುಗಡೆ ಪುತ್ತೂರು” ಮುಂತಾದವುಗಳಲ್ಲಿ ಇವರ ಹಲವಾರು ಸಾಹಿತ್ಯ ಬರಹಗಳು ಪ್ರಕಟವಾಗಿದೆ. ಅನೇಕ ಶಾಲೆ, ಸಾಹಿತ್ಯ ಸಮ್ಮೇಳನಗಳ, ಸ್ಮರಣ ಸಂಚಿಕೆಗಳ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುತ್ತಾರೆ. “ಪುತ್ತೂರು ಬಂಟಧ್ವನಿ ತ್ರೈಮಾಸಿಕ ಪತ್ರಿಕೆ”ಯ ಕಾರ್ಯ ನಿರ್ವಾಹಕ, ಸಂಪಾದಕನಾಗಿ ಸೇವೆ ಸಲ್ಲಿಸಿದ ಅನುಭವವು ಇವರಿಗಿದೆ. ಪುತ್ತೂರಿನಿಂದ ಪ್ರಕಟವಾಗುತ್ತಿರುವ “ಸುದ್ದಿ ಬಿಡುಗಡೆ ದಿನ ಪತ್ರಿಕೆ”ಯಲ್ಲಿ ಕಳೆದ 30ವರ್ಷಗಳಿಂದ “ಪ್ರತಿಭಾರಂಗ”, “ವ್ಯಂಗ್ಯ ರಂಗ”, “ಕಲಾರಂಗ”, “ಹನಿ-ಮಿನಿ”, “ಕಾವ್ಯ ರಂಗ”, “ಯುವ ರಂಗ” ಎಂಬ ಅಂಕಣದ ಮೂಲಕ ಮಕ್ಕಳಿಗೆ, ಯುವಕರಿಗೆ ಪ್ರೋತ್ಸಾಹ ನೀಡುವ ಮೂಲಕ ಅನೇಕ ಪ್ರತಿಭಾವಂತರ ಬೆಳವಣಿಗೆಗೆ ವೇದಿಕೆಯಾದವರು. ಸುಮಾರು 25ವರ್ಷಗಳ ಕಾಲ ಮಕ್ಕಳಿಗೆ “ಪ್ರತಿಭಾ ದೀಪ” ಪುರಸ್ಕಾರ ನೀಡುವ ಮೂಲಕ ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತಂದು ಪ್ರೋತ್ಸಾಹಿಸಿ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.
“ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ”ಯ “ದಕ್ಷಿಣ ಕನ್ನಡ ಶಿಕ್ಷಣ ಮತ್ತು ತರಬೇತಿ ಸಂಸ್ಥೆ” 2015-16ನೇ ಸಾಲಿನ “ಕೆ.ಎಸ್.ಕ್ಯೂ.ಎ.ಸಿ.ಯ” ಕರ್ನಾಟಕ ಶಾಲಾ ಗುಣಮಟ್ಟ, ಮೌಲ್ಯಾಂಕಣ ಮತ್ತು ಅಂಗೀಕರಣ ಪರಿಷತ್ ಬೆಂಗಳೂರು ಇದರಲ್ಲಿ ಬಾಹ್ಯ ಮೌಲ್ಯಾಂಕಣಕಾರರಾಗಿ ಶಾಲೆ ಶಾಲೆಗಳಿಗೆ ಭೇಟಿ ನೀಡುವ ತಂಡದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ “ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರ ಸಂಘ ಪುತ್ತೂರು” ಇದರ ತ್ರೈಮಾಸಿಕ ಪತ್ರಿಕೆ “ಮಧು ಪ್ರಪಂಚ”ದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯರನ್ನಾಗಿ(ಅರೆಕಾಲಿನ ಕಾನೂನು) ಸ್ವಯಂ ಸೇವಕರು, ಪ್ಯಾರಾ ಲೀಗಲ್ ವಾಲಂಟೀಯರ್ಸ್‍ಗೆ ಇವರನ್ನು ಆಯ್ಕೆ ಮಾಡಿರುತ್ತಾರೆ.
ನಾರಾಯಣ ರೈಯವರ ಬಹುಮುಖ ಪ್ರತಿಭೆಗೆ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವಗಳು ಲಭಿಸಿವೆ.
ಸ್ಪರ್ಧೆಗಳಲ್ಲಿ ಭಾಗವಹಿಸುವುದು ಎಂದರೆ ಇವರಿಗೆ ತುಂಬಾ ಇಷ್ಟ.
ಬಿರುದು ಸನ್ಮಾನಗಳು
“ರಾಜ್ಯ ಮಟ್ಟದ ಚಿಂತನ ಪ್ರಬಂಧ ಸ್ಪರ್ಧೆಯಲ್ಲಿ ಡಾ|ರಾಧಾಕೃಷ್ಣ ಶಿಕ್ಷಕ ರಾಜ್ಯ ಪ್ರಶಸ್ತಿ”, “1987-88ರಲ್ಲಿ ಪುತ್ತೂರು ತಾಲೂಕು ಉತ್ತಮ ಶಿಕ್ಷಕ ಪುರಸ್ಕಾರ”, “1988-89ರಲ್ಲಿ ಪುತ್ತೂರು ತಾಲೂಕು ಪ್ರತಿಭಾವಂತ ಶಿಕ್ಷಕ ಪುರಸ್ಕಾರ, 1987-88ರಲ್ಲಿ ಮದರಾಸು ಬಂಟರ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಸನ್ಮಾನ”, ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಏರ್ಪಡಿಸಿದ “1987-88ನೇ ಸಾಲಿನ ಶಿಕ್ಷಣದ ಹಿರಿಮೆಗೆ ರಾಜ್ಯ ಪುರಸ್ಕಾರ ಯೋಜನೆಯನ್ವಯ ಏರ್ಪಡಿಸಿದ್ದ ಲೇಖನ-ಪ್ರಬಂಧ ಸ್ಪರ್ಧೆಯಲ್ಲಿ ಶಿಕ್ಷಣ ಸಂಶೋಧನೆ ಪ್ರಾಯೋಗಿಕ ಯೋಜನೆ ಒಂದು ರಾಷ್ಟ್ರೀಯ ಶಿಕ್ಷಣ ನೀತಿ, ಪ್ರಯೋಗ ತಂತ್ರ ಅನುಭವ ವಿಧಾನಗಳು ಎಂಬ ಸಂಶೋಧನಾತ್ಮಕ ಪ್ರಬಂಧದಲ್ಲಿ ಶಿಕ್ಷಣದಲ್ಲಿ ಹಿರಿಮೆಗೆ ನಗದು ಮತ್ತು ಪ್ರಶಸ್ತಿ ಪತ್ರದೊಂದಿಗೆ ರಾಜ್ಯ ಪುರಸ್ಕಾರ”, “1988-89ನೇ ಸಾಲಿನ ಇದೇ ಸ್ಪರ್ಧೆಯಲ್ಲಿ ಸತತ 2ನೇ ಬಾರಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಪರಿಸರ ಅಧ್ಯಯನ ಒಂದು ರಾಷ್ಟ್ರೀಯ ಚಿಂತನೆ ಎಂಬ ಸಂಶೋಧನಾತ್ಮಕ ಪ್ರಬಂಧದಲ್ಲಿ ರಾಜ್ಯ ಪುರಸ್ಕಾರ”, “1988-89ರಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ನಡೆಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯಧಿಕ ಅಂಕಗಳೊಂದಿಗೆ ಪಾಲಕದರ್ಶಿನಿ ರಾಜ್ಯ ಪ್ರಶಸ್ತಿ”, “ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನವು ಶಿಕ್ಷಣ ಕ್ಷೇತ್ರದಲ್ಲಿ ಶ್ಲಾಘನೀಯ ಸೇವೆಗಾಗಿ1992-93ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”, “ಆಕಾಶವಾಣಿ ಮಡಿಕೇರಿ ಕೇಂದ್ರವು ಕರ್ನಾಟಕ ಕಾನೂನು ನೆರವು ಮಂಡಳಿಯ ಸಹಕಾರದೊಂದಿಗೆ ಪ್ರಸಾರ ಮಾಡಿದ “ನ್ಯಾಯಲೋಕ ಬಾನುಲಿ” ಸರಣಿಯ ಮುಕ್ತ ಪರೀಕ್ಷೆಯಲ್ಲಿ ಭಾಗವಹಿಸಿ ಅತ್ಯಧಿಕ ಅಂಕಗಳೊಂದಿಗೆ “ನ್ಯಾಯಾಲಯ ಬಾನುಲಿ ಪುರಸ್ಕಾರ”, “ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಪ್ರಸಾರವಾದ ಎಳೆಯರಿಗಾಗಿ ಪರಿಸರ ಬಾಂದನಿ ಕಾರ್ಯಕ್ರಮದಲ್ಲಿ ಪ್ರಶಸ್ತಿ”, “ಕರ್ನಾಟಕ ಸಂಘ ಡೊಂಬಿವಲಿ ವಾಚನಾಲಯ ಸಮಿತಿ ಮುಂಬೈ ನಡೆಸಿದ ಡಾ| ಶಿವರಾಮ ಕಾರಂತ ಸಂಸ್ಮರಣ ಸ್ಪರ್ಧೆಯಲ್ಲಿ ನಗದು, ಪ್ರಶಸ್ತಿ ಪತ್ರ”, “ಮುಂಬಯಿ ಮೊಗವೀರ ಮಾಸಪತ್ರಿಕೆ, ಮುಂಬೈಯ ಅಕ್ಷಯ ಮಾಸಪತ್ರಿಕೆ, ಬೆಂಗಳೂರಿನ ರಾಗ ಸಂಗಮ ಮಾಸಪತ್ರಿಕೆಯವರು ನಡೆಸಿದ ವ್ಯಂಗ್ಯ ಚಿತ್ರ, ಲೇಖನ ಸ್ಪರ್ಧೆಗಳಲ್ಲಿ ಹಲವು ಬಾರಿ ನಗದು ಪುರಸ್ಕಾರ., “ಸಂಯುಕ್ತ ಕರ್ನಾಟಕ ಸಹಯೋಗದಲ್ಲಿ ನಡೆಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ನಗದು ಪುರಸ್ಕಾರ”, “ಚಿತ್ರದುರ್ಗ ಚಿಂತನ ಪ್ರಕಾಶನ ವತಿಯಿಂದ 2000ದಲ್ಲಿ ಚಿಂತನ ಶಿಕ್ಷಕ ಪ್ರಶಸ್ತಿ”, “ಚಿತ್ರದುರ್ಗ ಪುಟಾಣಿ ವಿಜ್ಞಾನದವರು 2002ರಲ್ಲಿ ವಿಜ್ಞಾನ ಮಿತ್ರ ಶಿಕ್ಷಕರ ಪುರಸ್ಕಾರ”, “ಮಡಿಕೇರಿ ಬಂಟರ ಸಂಘದಿಂದ ಸನ್ಮಾನ ಕಾಂಚನೋತ್ಸವ ಸನ್ಮಾನ”, “ಪುತ್ತೂರು ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಸಾಧನೆಗೆ 2004ರಲ್ಲಿ ಸನ್ಮಾನ”, “ ಸುಮ ಸೌರಭ ಕನ್ನಡ ಸಾಹಿತ್ಯ ಪಾಕ್ಷಿಕ ಪತ್ರಿಕೆ ಮಂಗಳೂರು ಇವರಿಂದ ಶಿಕ್ಷಣ ಸಾಹಿತ್ಯ ಸಾಧನೆಗಾಗಿ 2005ರಲ್ಲಿ ಸುಮ ಸೌರಭ ಪ್ರಶಸ್ತಿ”, “ಸಿಲಿಕಾನ್ ಸಿಟಿ ಬೆಂಗಳೂರಿನ ಜೇಸೀ ವತಿಯಿಂದ ಶಿಕ್ಷಣ ಸಾಧನೆಗಾಗಿ 2005ರ ಗುರು ಪುರಸ್ಕಾರ”, “ರಂಗ ಸಮಾಜ ಬೆಂಗಳೂರು ವತಿಯಿಂದ ಗಾಂಧೀ ಜಯಂತಿ ಪ್ರಯುಕ್ತ ಜರಗಿದ ವೈದ್ಯಾರಾಧನೆ ಕಾರ್ಯಕ್ರಮದಲ್ಲಿ ಶಿಕ್ಷಣ, ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ “ಸಮಾಜ ರತ್ನ” ರಾಜ್ಯ ಪ್ರಶಸ್ತಿ-2008, “ಕರ್ನಾಟಕ ಪ್ರತಿಭಾ ಅಕಾಡೆಮಿ ಬೆಂಗಳೂರು ವತಿಯಿಂದ ಡಾ| ರಾಧಕೃಷ್ಣ ಶಿಕ್ಷಕ ಪ್ರಶಸ್ತಿ”, “ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಇದರಿಂದ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ 2008ರ ಆರ್ಯಭಟ ಪ್ರಶಸ್ತಿ”, “ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ವತಿಯಿಂದ “ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ವಿಶೇಷ ಸೇವೆಯನ್ನು ಗುರುತಿಸಿ ಪುತ್ತೂರು ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2008ರಲ್ಲಿ ಸನ್ಮಾನ”, “ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆ ಬೆಂಗಳೂರು ಇವರು ಶಿಕ್ಷಣ ಹಾಗೂ ಸಾಹಿತ್ಯ ಕೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗೆ ಕಡಲ ತೀರದ ಭಾರ್ಗವ ಡಾ| ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ-2011” “ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ವತಿಯಿಂದ ಕಲಾಶ್ರಯ ಪುರಸ್ಕಾರ”, “ಬಂಟ್ವಾಳ ಮೀಡಿಯಾ ನೆಟ್‍ವರ್ಕ್ ಬಿ.ಸಿ ರೋಡ್ ವತಿಯಿಂದ ನಮ್ಮ ಬಂಟ್ವಾಳ ಪತ್ರಿಕಾ ಸಹಕಾರದಲ್ಲಿ ನಡೆದ ಲೇಖನ ಸ್ಪರ್ಧೆಯಲ್ಲಿ 2015ರ ನೇತ್ರಾವತಿ ಪುರಸ್ಕಾರ”, “ಚಿಂತನ ಪ್ರಕಾಶನ ಚಿತ್ರದುರ್ಗ ನಡೆಸಿದ ರಾಜ್ಯಮಟ್ಟದ ಚಿಂತನ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಬಹುಮಾನ 2010ರಲ್ಲಿ ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ”.
ಇಷ್ಟೇ ಅಲ್ಲದೆ “ಬಯ್ಯ ಮಲ್ಲಿಗೆ”, “ಕಾವೇರಿ”, “ಕಣ್ಣ್ ಬುಳನಗ” ಮೊದಲಾದ ನಾಟಕಗಳಲ್ಲಿ ಪಾತ್ರವಹಿಸಿದ ಇವರು ಮಂಗಳೂರು ಆಕಾಶವಾಣಿಯಲ್ಲಿ ಅನೇಕ ಕಥೆ, ಕವನ, ಗುಬ್ಬಿದ ಗೂಡು, ಯಕ್ಷಗಾನ, ರಸಪ್ರಶ್ನೆ, ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿರುತ್ತಾರೆ. “ಚಂದನ ವಾಹಿನಿ”ಯಲ್ಲಿ ಪ್ರಸಾರವಾದ “ತುಳು ಕವಿಕೂಟ” ಮತ್ತು “ಕೋಟಿ ಚೆನ್ನಯ್ಯ” ಯಕ್ಷಗಾನದಲ್ಲಿಯೂ ಪಾಲು ಪಡೆದಿರುವರು.
“ಅಕ್ಷರ ಪ್ರೀತಿ ಬಹಳ ಮುಖ್ಯ” ಅನ್ನೋದು ಈ ಗುರುಗಳ ವೇದಾಂತ, ಈಗಿನ ಯುವ ಜನತೆ ಮಾದ್ಯಮದಲ್ಲಿ ಬೆಳಗುವುದು ನೋಡಿ ಇವರಿಗೆ ಕೆಲವು ಸಲ ಸೋಲು, ಸವಾಲುಗಳು ಏನೇ ಬಂದರು ಅದನ್ನು ಮರೆಯುತ್ತಾರೆ. ದೊಡ್ಡ ವಿದ್ವಾಂಸರಾದ ರಸಿಕ ಪುತ್ತಿಗೆ, ವಿ.ಬಿ. ಅರ್ತಿಕಜೆ, ಪಾಲ್ತಾಡಿ ರಾಮಕೃಷ್ಣ ಆಚಾರ್, ಕುದ್ಕಾಡಿ ವಿಶ್ವನಾಥ ರೈ, ಡಾ|ವಸಂತ ಕುಮಾರ್ ಪೆರ್ಲ ಮೊದಲಾದವರು ಇವರ ಬರವಣಿಗೆ, ಸಾಹಿತ್ಯವನ್ನು ಮೆಚ್ಚಿದ್ದರು. ಸುವರ್ಣ ಚಾನೆಲ್ ಏರ್ಪಡಿಸಿದ ಕೈ ಬರಹ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಿತರಾದ ಕುಕ್ಕುವಳ್ಳಿಯವರಿಗೆ ತಂತ್ರಜ್ಞಾನ ಅದೇನೇ ಬಂದರು ಕೈ ಬರವಣಿಗೆಯಲ್ಲಿಯೇ ತುಂಬಾ ಪ್ರೀತಿ, ಆಸಕ್ತಿ.. ಕಾರ್ಟೂನ್, ವ್ಯಂಗ್ಯ ಚಿತ್ರ ಇವುಗಳನ್ನು ಸ್ವಂತವಾಗಿ ಬರೆದು ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಇವರನ್ನು ಎಲ್ಲರೂ ಪ್ರೋತ್ಸಾಹಿಸುವವರೇ ಹೊರತು ವಿರೋಧಿಸುವವರಿಲ್ಲ.
ಆಧುನಿಕ ದ್ರೋಣ
ಪ್ರಸ್ತುತ ನಿವೃತ್ತರಾದರೂ ತನ್ನ ಪ್ರವೃತ್ತಿಯಲ್ಲಿ ಸದಾ ಚಟುವಟಿಕೆಯಿಂದ ಇರುವ ಇವರು ಅದೆಷ್ಟೋ ಯುವ ಸಾಹಿತಿಗಳನ್ನು ಯುವ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಆಧುನಿಕ ದ್ರೋಣ ಎಂದರೆ ತಪ್ಪಾಗಲಾರದು.
ಮನುಷ್ಯನ ಸ್ವಾರ್ಥ, ಪರಿಸರ ನಾಶ, ಆಸೆ ದುರಾಸೆಗಳಿಂದ ಇಂದು ಇಡೀ ಜಗತ್ತೇ ಇಂಥ ಮೂಗು-ಬಾಯಿ ಮುಚ್ಚುವ ಪರಿಸ್ಥಿತಿಗೆ ಒಳಗಾಗಿರುವುದು ಬದುಕಿನ ಒಂದು ದುರಂತವೇ ಸರಿ ಎಂದು ಹೇಳುವ ಕುಕ್ಕುವಳ್ಳಿಯವರು “ನಾವು ಹೆಜ್ಜೆಯಿಡುವ ಹಾದಿಯಲಿ ಕಲ್ಲುಂಟು, ಮುಳ್ಳುಂಟು, ನಿಜದ ನೇರಕೆ ನಡೆದಾಗ ಅಲ್ಲಿ ಹಸಿರುಂಟು ನಿತ್ಯ ಗೆಲುವುಂಟು” ಎಂಬ ಆದರ್ಶದ ಮಾತುಗಳನ್ನಾಡುವರು.
ನಾಡು, ನುಡಿ, ಕಲೆ, ಸಾಹಿತ್ಯ, ಶಿಕ್ಷಣ, ಪರಿಸರ, ಮಾನವ ದೇಶ ಪ್ರೇಮ ಹೊಂದಿರುವ ಹಿರಿಯ ನಿವೃತ್ತ ಶಿಕ್ಷಕರಾದ ನಾರಾಯಣ ರೈ ಕುಕ್ಕುವಳ್ಳಿಯವರಿಗೊಂದು ನಮ್ಮ ಸಲಾಂ. ಪರಿಸರ ಪ್ರೇಮಿ, ಕೃಷಿಕರಾಗಿರುವ ಕುಕ್ಕುವಳ್ಳಿಯವರು ತಮ್ಮ ಮಕ್ಕಳೊಂದಿಗೆ “ನಿತಿನ್ ನುಳಿಯಾಲು” ಇವರ ಮನೆಯಲ್ಲಿ ನಿವೃತ್ತ ಜೀವನವನ್ನು ಕಳೆಯುತ್ತಿರುವರು. ಶ್ರೀಯುತರ ಶ್ರಮ, ಸಾಧನೆ, ಕ್ರಿಯಾಶೀಲತೆ ನಮಗೆಲ್ಲರಿಗೂ ಮಾದರಿಯಾಗಲೆಂಬುವುದೇ ಸಾಧಕರ ಕಲಾಂನ ಆಶಯ.
ಲೇಖನ : ರಂಜಿನಿ ಬಂಗೇರ ಕಳಗಂಜೆ
ಸಹಕಾರ : ಸಾಯಿ ದೀಕ್ಷಿತ್ ಪುತ್ತೂರು
ಮೂಲ : ಸಾಧಕರ ಹಾದಿ ಫೇಸ್ಬುಕ್ ಪೇಜ್