ಸಾಹಿತ್ಯ ಎಂಬುದು ಎಲ್ಲರಿಗೂ ಒಲಿಯುವಂಥದ್ದಲ್ಲ. ಸಾಹಿತ್ಯ ಒಲಿದವರಿಗೆ ಯಶಸ್ಸು ದೂರ ಉಳಿಯುವಂತದಲ್ಲ. ಯಾವುದೇ ಪ್ರತಿಭೆ ಇರಲಿ ಆ ಪ್ರತಿಭೆಯನ್ನು ನಮ್ಮಲ್ಲಿ ನಾವೇ ಗುರುತಿಸಿಕೊಂಡು ಮುನ್ನಡೆದರೆ ಅಂಥವರು ಖಂಡಿತಾ ಯಶಸ್ಸು ಕಾಣುತ್ತಾರೆ. ಸಾಧನೆ ಪ್ರತಿ ಹೆಜ್ಜೆಗೂ ಇರಬೇಕು. ಇಂತಹ ಸಾಧನೆಯ ಸಾಧಿಸಿ ಯಶಸ್ಸು ಸಿದ್ದಿಸುವ ಪಟ್ಟಿಯಲ್ಲಿ ಸೇರುವ ಪ್ರಯತ್ನದಲ್ಲಿ ಮತ್ತು ಸಾಧನೆಯ ಶಿಖರ ಏರುವ ನಮ್ಮೂರಿನ ಸಾಹಿತ್ಯ ಸಾಧಕಿ ಯುವ ಬರಹಗಾರ್ತಿ ಪತ್ರಕರ್ತೆ ಹರ್ಷಿತಾ ಹರೀಶ್ ಕುಲಾಲ್ ಕಿರು ಪರಿಚಯ ಕೂಲ್ ಸಾಧಕರ ಪಟ್ಟಿಯಲ್ಲಿ.
ತಂದೆ,ತಾಯಿ,ಗುರುವಿಗೆ ಬಹಳ ಹತ್ತಿರವಾಗುವವರೆಂದರೆ ಅವರ ಮಗ – ಮಗಳು. ಗುರುವಿಗೆ ಶಿಷ್ಯ-ಶಿಷ್ಯೆಯರು.
ಶ್ರೀಮತಿ ಹರ್ಷಿತಾ ಹರೀಶ್ ಕುಲಾಲ್ ಕಾವು, ಅವರು ತನ್ನ ವಿದ್ಯಾಭ್ಯಾಸ ಸಂದರ್ಭದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿರುವಾಗ ರಂಗೋಲಿ, ಪೈಂಟಿಂಗ್ಸ್, ಲೇಖನ ಕವನ ಬರೆದು ಕೊಡುತ್ತಿದ್ದರು. ಅದನ್ನು ಕಾಲೇಜಿನ ವಾಲ್ ಮ್ಯಾಗಝಿನ್ ನಲ್ಲಿ ಬಣ್ಣ ಹಚ್ಚಿ ಹಾಕಿದ ನೆನಪುಗಳು ಹಚ್ಚ ಹಸಿರಾಗಿವೆ.
ಕಾವು ಶ್ರೀ ವೆಂಕಪ್ಪ ಕುಲಾಲ್ ಮತ್ತು ಶ್ರೀಮತಿ ಮೀನಾಕ್ಷಿಯವರ ಹಿರಿಯ ಮಗಳಾದ ಹರ್ಷಿತಾರಿಗೆ ಕು.ಪ್ರಜ್ಞಾ ಕುಲಾಲ್, ಕು.ಯಶಸ್ವಿನಿ , ಕು.ತ್ರಿವೇಣಿ, ಮೂವರು ಸಹೋದರಿಯರು. ಹೆಣ್ಣು ಮಕ್ಕಳು ಸಾಧಿಸಿದರೆ ಕುಟುಂಬ, ಶಿಕ್ಷಣ, ಕಲೆ-ಸಾಹಿತ್ಯ, ನಾಡು-ನುಡಿ-ಸಮಾಜ ಬೆಳಗುವ ನಕ್ಷತ್ರಗಳಾಗುವರು ಎಂಬುದಕ್ಕೆ ಕಾವು ಶ್ರೀ ವೆಂಕಪ್ಪ ಕುಲಾಲ್,ಶ್ರೀಮತಿ ಮೀನಾಕ್ಷಿ ಕುಟುಂಬವೇ ಆದರ್ಶ.
ತನ್ನ ಪ್ರಾಥಮಿಕ- ಒಂದರಿಂದ ಎಂಟನೇ ತರಗತಿವರೆಗಿನ ಶಿಕ್ಷಣವನ್ನು ಹುಟ್ಟೂರು ಕಾವು ದ.ಕ.ಜಿ.ಪ.ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ, ಪ್ರೌಢ, ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು, ಪುತ್ತೂರು ಇಲ್ಲಿ ಪೂರ್ಣಗೊಳಿಸಿದ ಹರ್ಷಿತಾ ಅವರು, ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದರು.
ಪ್ರಕೃತ ಹರೀಶ್ ಐವರ್ನಾಡು ಅವರ ಬಾಳಸಂಗಾತಿಯಾಗಿ ಮಗು ಚಿ.ಪೂರ್ವಜ್ ಅವರ ಅಮ್ಮನಾಗಿ ಸಂತೃಪ್ತ ಬದುಕು ಕಟ್ಟಿಕೊಂಡಿರುವವರು ಮನೆಯ ಮುದ್ದಿನ ಮಗಳು. ಅತ್ತೆ-ಮಾವನವರ ಮುದ್ದಿನ ಸೊಸೆ, ಯುವ ಬರಹಗಾರ್ತಿ ಶ್ರೀಮತಿ ಹರ್ಷಿತಾ ಹರೀಶ್ ಕುಲಾಲ್ ಕಾವು.
ವಿದ್ಯಾರ್ಥಿ ಜೀವನದಲ್ಲೇ ಕಲೆ ಸಾಹಿತ್ಯ ಪತ್ರಿಕಾರಂಗದಲ್ಲಿ ಆಸಕ್ತಿ ಹೊಂದಿದ್ದ ಹರ್ಷಿತಾ ಮುಂದೆ ಪತ್ರಕರ್ತೆಯಾಗಿ ಉದಯವಾಣಿ, ಹೊಸದಿಗಂತ, ಸುದ್ದಿ ಬಿಡುಗಡೆ, ವಿಜಯಕರ್ನಾಟಕ, ಪ್ರಜಾವಾಣಿ, ವಿಜಯವಾಣಿ, ಬಿಂಬ ಧ್ವನಿ. ಮೊದಲಾದ ಪತ್ರಿಕೆಗಳಲ್ಲಿ ಅನೇಕ ಲೇಖನ, ಪ್ರತಿಭೆಗಳ ಪರಿಚಯ ಮಾಡುವುದರ ಮೂಲಕ ಓದುಗರ ಗಮನ ಸೆಳೆದವರು. ಮಧುಪ್ರಪಂಚ, ತರಂಗ, ಮಂಗಳ ಇನ್ನಿತರ ಸಂಚಿಕೆಗಳಲ್ಲೂ ವೈಚಾರಿಕ ಲೇಖನ ಕವನಗಳು ಪ್ರಕಟವಾಗುತ್ತಿವೆ. ಪ್ರಕೃತ ಉಪಯುಕ್ತ ವೆಬ್ ನ್ಯೂಸ್, news arrow, BIMN news, ನೂಪುರ, ವಿಶ್ವವಾಣಿ ಇವುಗಳ ವರದಿಗಾರ್ತಿಯೂ ಹೌದು.
ಬಾಲ್ಯದಲ್ಲಿಯೇ ಚಿತ್ರಕಲೆ, ರಂಗೋಲಿ, ಕೇಶವಿನ್ಯಾಸ (ಹೇರ್ ಸ್ಟೈಲ್), ಫೊಟೋಗ್ರಫಿ ಹವ್ಯಾಸ ಹೊಂದಿರುವ ಹರ್ಷಿತಾರಿಗೆ ಅವರ ಕುಟುಂಬದವರ ಪ್ರೋತ್ಸಾಹ ಸದಾ ಇದೆ. ಬಾಲ್ಯದಲ್ಲಿ ಕಾಲಿಗೆ ಗೆಜ್ಜೆಕಟ್ಟಿ ಕುಣಿದ ಯಕ್ಷಗಾನ ಕಲಾವಿದೆಯೂ ಹೌದು. ಇವರು ಬಿಡಿಸಿದ ಅನೇಕ ಚಿತ್ರ ಪೈಂಟಿಂಗ್ಸ್ ಗಳಿಗೆ ಹಲವು ಬಹುಮಾನಗಳೂ ಬಂದಿವೆ. ಹಲವು ಸಾಧಕರ ಸಂದರ್ಶನ ಮಾಡಿ ಅವರ ಬಗ್ಗೆ ಲೇಖನ ಬರೆಯುತ್ತಿದ್ದ ಹರ್ಷಿತ ಅವರು ಇಂದು ಅದೇ ಸಾಧಕರ ಕಾಲಂ ಗೆ ಲೇಖನ ದ ಸಾಧಕಿಯಾಗಿ ನಿಂತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ಸೃಜನ ಶೀಲ ಬರಹಗಾರ್ತಿ ಪತ್ರಕರ್ತೆ ಶ್ರೀಮತಿ ಹರ್ಷಿತಾ ಹರೀಶ್ ಕುಲಾಲ್ ಕಾವು ಇನ್ನೂ ಹೆಚ್ಚಿನ ಸಾಹಿತ್ಯ ಸೇವೆ ಮಾಡಲೆಂದು ಶುಭ ಹಾರೈಸೋಣ.
ಬರಹ : ✍️ನಾರಾಯಣ ರೈ ಕುಕ್ಕುವಳ್ಳಿ. ಪ್ರಧಾನ ಸಂಪಾದಕರು ಮಧುಪ್ರಪಂಚ ಪುತ್ತೂರು.