ನಾನು ಅವನಲ್ಲ ಅವಳು ಸಿನಿಮಾದ ಅದ್ಭುತ ನಟನೆಯಿಂದ ಇಡೀ ಚಿತ್ರರಂಗವನ್ನು ಮತ್ತು ಚಿತ್ರರಸಿಕರನ್ನು ತನ್ನೆಡೆ ಸೆಳೆಯುವಂತೆ ಮಾಡಿದ ಸಂಚಾರಿ ವಿಜಯ್ ಇಂದು ತನ್ನ ಬದುಕಿನ ಸಂಚಾರವನ್ನೇ ನಿಲ್ಲಿಸಿ ಮೇಲಿರುವ ಮಾಯಾವಿಯ ಕೈ ಸೇರಿ ತನ್ನ ಕುಟುಂಬದವರ ಜೊತೆ ಚಿತ್ರಪ್ರೇಮಿಗಳಲ್ಲಿ ಹಾಗೇನೇ ಅಪಾರ ಅಭಿಮಾನಿ ಬಳಗದಲ್ಲಿ ಶೋಕ ಮಡುಗಟ್ಟುವಂತೆ ಮಾಡಿದ್ದಾರೆ. Sanchari vijay bike accident.
ಸಂಚಾರಿ ವಿಜಯ್ಯವರು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ 1983 ಜುಲೈ 18ರಂದು ಜನಿಸಿದರು. ವಿಜಯ್ ಕುಮಾರ್ ಎಂಬ ಅವರ ಮೂಲ ಹೆಸರಿನ ಇವರಿಗೆ ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದು ರಂಗಭೂಮಿಯಲ್ಲಿ ಪಳಗಿದರು. ಸಂಚಾರಿ ಎಂಬ ಥಿಯೇಟರ್ ಗ್ರೂಪ್ನಿಂದ ಬಂದ ಕಾರಣ ಚಿತ್ರರಂಗದಲ್ಲಿ ಸಂಚಾರಿ ವಿಜಯ್ ಎಂದೆ ಪ್ರಸಿದ್ದಿ ಪಡೆದುಕೊಳ್ಳುತ್ತಾರೆ.
ಇವರು 2011 ರಲ್ಲಿ ರಂಗಪ್ಪ ಹೋಗ್ಬಿಟ್ಟ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಂಚಾರಿ ವಿಜಯ್ ನಂತರ ರಾಮ ರಾಮ ರಘುರಾಮ, ದಾಸವಾಳ, ಹರಿವು, ಒಗ್ಗರಣೆ, ನಾನು ಅವನಲ್ಲ ಅವಳು, ಕಿಲ್ಲಿಂಗ್ ವೀರಪ್ಪನ್, ಗೋದಿಬಣ್ಣ ಸಾಧಾರಣ ಮೈಕಟ್ಟು, ಸಿಪಾಯಿ, ಇದೊಳ್ಳೆ ರಾಮಾಯಣ, ರಿಕಿತ, ಅಲ್ಲಮ ಹೀಗೆ 25 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಅತಿ ಕಡಿಮೆ ಸಿನೀಮಾ ಪಯಣದಲ್ಲೇ ಬೇಗ ಯಶಸ್ಸು ಕಂಡರೂ ಅದರ ಹಿಂದೆ ಪಟ್ಟಿರುವ ಶ್ರಮ ಎಂತಹದ್ದು ಎಂಬುದನ್ನು ಸಂಚಾರಿ ವಿಜಯ್ ಅವರು ತಮ್ಮ ಹಲವು ಸಂದರ್ಶನದಲ್ಲಿ ಮನಬಿಚ್ಚಿ ಹೇಳಿದ್ದಾರೆ. Sanchari vijay bike accident
ಇವರ ನಟನೆಯ ಹರಿವು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ತನ್ನದೇ ನಟನೆಯ ನಾನು ಅವನಲ್ಲ ಅವಳು ಚಿತ್ರದ ಅದ್ಭುತ ನಟನೆಗೆ ಅತ್ಯುತ್ತಮ ನಟ ಎಂದು ರಾಷ್ಟ್ರ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿಯವರಿಂದ ಪಡೆದುಕೊಳ್ಳುತ್ತಾರೆ. ಇದು ಇವರ ನಟನೆಗೆ ಇನ್ನಷ್ಟು ಗರಿ ಸಿಕ್ಕಂತಾಗುತ್ತದೆ. ಇದರ ನಂತರ ಅವರಿಗೆ ಅವಕಾಶಗಳು ಸಾಲು ಸಾಲಾಗಿ ಹರಿದು ಬರುತ್ತದೆ. ಮತ್ತು ಯಶಸ್ಸಿನತ್ತ ದಾಪುಗಾಲು ಇಡುತ್ತಾರೆ. ಅವರು ಇತ್ತೀಚೆಗಷ್ಟೇ ಅಭಿನಯಿಸಿರುವ ತಲೆದಂಡ ಚಿತ್ರದಲ್ಲಿ ವಿಶೇಷ ರೀತಿಯಲ್ಲಿ ಒಂದು ಪಾತ್ರವನ್ನು ನಿರ್ವಸಿದ್ದು ಈ ನಯನೆಗೂ ಇನ್ನೊಂದು ರಾಷ್ಟ್ರಪ್ರಶಸ್ತಿಯ ಗರಿ ದಕ್ಕುವುದರಲ್ಲಿ ಸಂಶಯವಿರಲಿಲ್ಲ. ಈ ಚಿತ್ರದ ಜೊತೆಗೆ ಮೇಲೊಬ್ಬ ಮಾಯಾವಿ ಚಿತ್ರವು ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ.
ತಾನು ಅಷ್ಟು ದೊಡ್ಡ ಸ್ಟಾರ್ ಆದರೂ ರಾಷ್ಟ್ರಪ್ರಶಸ್ತಿ ವಿಜೇತ ನಟನಾದರೂ ಒಂದಿಷ್ಟು ಅಹಂ ಭಾವ ತೋರಿಸದೆ ತನ್ನ ಅಭಿಮಾನಿಗಳ ಜೊತೆ ಜನಗಳ ಜೊತೆ ಸಾಮಾನ್ಯರಂತೆ ಬದುಕುತ್ತಿದ್ದ ವಿಜಯವರು ಸಮಾಜಮುಖಿ ಕಾರ್ಯದಲ್ಲೂ ತನ್ನನು ತಾನು ತೊಡಗಿಸಿಕೊಳ್ಳುತ್ತಿದ್ದ ಹೃದಯಶ್ರೀಮಂತ. ಲೊಕ್ಡೌನ್ ಕಾಲದಲ್ಲಿ ಹಲವು ಅಸಹಾಯಕರಿಗೆ ಪರಿಹಾರ ಕೊಡುವ ಕಾರ್ಯದಲ್ಲಿ ಸಂಚಾರಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಹೀಗಾಗಿ ಬಣ್ಣದ ಲೋಕದಾಚೆಗೂ ವಿಜಯ್ ಅವರಿಗೆ ಅಭಿಮಾನಿಗಳು ಸಾಕಷ್ಟಿದ್ದರೂ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಜೂನ್ 12 ರ ರಾತ್ರಿ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಳ್ಳುತ್ತಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಗುತ್ತದೆ. ನಂತರ ಅವರ ಮೆದುಳು ನಿಷ್ಕ್ರಿಯಗೊಂಡು ಕೊನೆಗೆ ಜೂನ್ 14 ರಂದು ತನ್ನ ಅಪಾರ ಅಭಿಮಾನಿ ಬಳಗವನ್ನು ಮತ್ತು ಬಂಧು ಮಿತ್ರರನ್ನು ಆಗಲಿ ವಿಧಿಯ ಕ್ರೂರ ಲೀಲೆಗೆ ಬಲಿಯಾಗುತ್ತಾರೆ. ವಿಜಯವರ ಆಸೆಯಂತೆ ತನ್ನ ಅಂಗಾಂಗ ದಾನಕ್ಕೆ ವಿಜಯ್ ಕುಟುಂಬ ಒಪ್ಪಿಗೆ ಸೂಚಿಸುತ್ತಾರೆ. ಸಾವಿನಲ್ಲೂ ವಿಜಯ್ ಸಾರ್ಥಕತೆ ಮೆರೆದು ಮಾದರಿಯಾಗುತ್ತಾರೆ.
ಸಂಚಾರಿ ವಿಜಯ್ ಯವರ ಸಾವಿಗೆ ನೇರ ಕಾರಣ ಅವರು ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕದಿರುವುದು. ಅವರು ಹೆಲ್ಮೆಟ್ ಧರಿಸಿದ್ದರೆ ಖಂಡಿತವಾಗಿ ಅವರ ಪ್ರಾಣ ಉಳಿಯುತ್ತಿದ್ದು ಸಿನಿಮಾ ಜಗತ್ತಿಗೆ ಇನ್ನಷ್ಟು ಕೊಡುಗೆಗಳನ್ನು ನೀಡಬಹುದಿತ್ತು. ಹೆಲ್ಮೆಟ್ ಧರಿಸದೇ ಇದ್ದುದರಿಂದ ಸಾಕಷ್ಟು ಪ್ರಾಣಹಾನಿ ಆಗುತ್ತಿದ್ದರೂ, ಹೆಲ್ಮೆಟ್ ಧರಿಸಲು ಕಟ್ಟು ನಿಟ್ಟಿನ ನಿಯಮ ಇದ್ದರೂ, ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು ದುರದೃಷ್ಟಕರ. ದಯವಿಟ್ಟು ಹೆಲ್ಮೆಟ್ ಧರಿಸಿ. ನಿಮ್ಮ ಪ್ರಾಣ ರಕ್ಷಿಸಿಕೊಳ್ಳಿ.