ಪಾಣಾಜೆ ಪರಿಸರದ- ನಡೆದಾಡುವ ದೇವ ಪ್ರೀತಿಯ ಕುಟ್ಟ- ಕಬಿಲ ಇನ್ನಿಲ್ಲ. ನೆನಪಾಗಿ ಉಳಿದು ಹೋದ..!!
ಸುಮಾರು 20-25ವರ್ಷಗಳ ಹಿಂದೆ ಪಾಣಾಜೆ- ಆರ್ಲಪದವು ಪರಿಸರದ ಹತ್ತಾರು ಜನರು ಒಟ್ಟಸೇರಿ ಹಣಸಂಗ್ರಹ ಮಾಡಿ ಖರೀದಿಸಿದ ಕಬಿಲ ವರ್ಗದ ಗಂಡು ಕರು ಊರಿನ ಜನರ ಬಾಯಲ್ಲಿ ಪ್ರೀತಿಯಿಂದ ಕುಟ್ಟ ಎಂದು ಕರೆಯಲ್ಪಟ್ಟಿತು.
ಆರ್ಲಪದವು ಪರಿಸರದ ಮನೆ,ಅಂಗಡಿ, ಹೊಟೇಲ್ ಮುಂದೆ ನಿಲ್ಲುತ್ತಿದ್ದ ಕುಟ್ಟ ನಿಗೆ ಹಣ್ಣು ಕಾಯಿ ಅನ್ನ ನೀರು ಕೊಟ್ಟು ತಮ್ಮ ಮನೆ ಮಗನಂತೆ ಸಾಕಿದರು. ಆದರೆ ಯಾರ ಮನೆಯ ಹಟ್ಟಿಗೂ ಹೋಗದೆ ಆರ್ಲಪದವಿನ ರಸ್ತೆಯಲ್ಲಿ ನಡೆದಾಡುವ ದೇವನಾದ. ಎಲ್ಲರೂ ಆತನನ್ನು ಮುಟ್ಟಿ ನಮಸ್ಕರಿಸಿ ಪ್ರೀತಿ ತೋರುತ್ತಿದ್ದರು. ಎಲ್ಲಾ ಧರ್ಮದ ಜನರ ಪ್ರೀತಿ ಆಸರೆಯಲ್ಲಿ ಬೆಳೆದ ಕಬಿಲ ಕುಟ್ಟ-ಮಕ್ಕಳಿಗಾಗಲಿ ಹೋಗಿ ಬರುವ ಜನರಿರಾಗಿ ತೊಂದರೆ ಕೊಟ್ಟವನಲ್ಲ. ಒಂದು ವೇಳೆ ಶಾಲೆಗೆ ಹೋಗುವ ಸಣ್ಣ ಮಕ್ಕಳು ಅದರ ಎದುರಿಗೆ ಸಿಕ್ಕಿದರೆ ಅದು ಮಾರ್ಗ ಬದಲಿಸಿ ತಲೆ ಬೀಸುತ್ತ ಮಣಿ ಆಡಿಸುತ್ತ ರಾಜನಂತೆ ಸವಾರಿ ಮಾಡುತ್ತಿದ್ದ ದೃಶ್ಯ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಆರ್ಲಪದವು ಪಾಣಾಜೆಯ ಜಾತ್ರೋತ್ಸವದ ಸಂದರ್ಭ ಕುಟ್ಟನಿಗೆ ಸಂಭ್ರಮವೋ ಸಂಭ್ರಮ. ಹುಲಿಭೂತದ ನೇಮದ ಸಂದರ್ಭದಲ್ಲಿ ಪ್ರತೀ ವರ್ಷ ದೈವದ ಸವಾರಿಯ ಹೊತ್ತಿಗೆ ಸಾವಿರಾರು ಜನಸಾಗರದ ಮಧ್ಯೆ ಜೊತೆಗೂಡಿ ರಾಜಗಾಂಭಿರ್ಯದಿಂದ ಹೆಜ್ಜೆ ಹಾಕುವ ನೋಟ ಎಲ್ಲರ ಗಮನ ಸೆಳೆಯುತ್ತಿತ್ತು.
ಒಂದೊಮ್ಮೆ ಕಳ್ಳರ ಕೈಗೆ ಸಿಕ್ಕಿದ್ದ ಕುಟ್ಟನನ್ನು ಪಿಕಪ್ ನಲ್ಲಿ ತೆಗೆದು ಕೊಂಡು ಹೋಗಲು ಪ್ರಯತ್ನಿಸಿದಾಗ ಅದು ಸಾಧ್ಯವಾಗದೆ ಕುಳದ ಪಾದೆ ಎಂಬಲ್ಲಿ ಪಿಕಪ್ ನಿಂದ ಹಾರಿ ತನ್ನ ಊರು ಆರ್ಲಪದವಿಗೆ ಬಂದ ಸಾಹಸಿ ಊರಪ್ರೇಮಿ.
ರಾತ್ರಿಹೊತ್ತು ಹೆಚ್ಚಾಗಿ ಆರ್ಲಪದವು ದೈವಸ್ಥಾನ ಹಾಗೂ ಅಲ್ಲೇ ಹತ್ತಿರದ ಹೋಟೇಲ್ ಎದುರು ತನ್ನ ಪಾಡಿಗೆ ತಾನು ಮಲಗಿ ದಿನಕಳೆಯುತ್ತಿತ್ತು.
ಒಂದು ದಿನದಲ್ಲಿ ರಾಜ ಕುಟ್ಟನ ಸವಾರಿ ಸ್ವರ್ಗ ಪಾಣಾಜೆ ಆರ್ಲಪದವು ಬೆಟ್ಟಂಪಾಡಿ ಇರ್ದೆ ಕೈಕಾರ ಸಂಟ್ಯಾರ್ ಸುಳ್ಯಪದವು ಕಡೆಗೆ ಹೋದರೂ ಸಂಜೆ ತನ್ನ ಮೂಲ ನೆಲೆ ಆರ್ಲಪದವು ಪೇಟೆಗೆ ಬಂದು ಮಾಮೂಲಿ ಅಂಗಡಿ ಮನೆಗಳಿಗೆ ಹೋಗಿ ಬಂದು ಹೊಟ್ಟೆ ಹೊರೆಯುತ್ತಿತ್ತು.
ಐದಾರು ವರ್ಷಗಳ ಹಿಂದೆ ಯಾರೋ- ಕಾಡುಪ್ರಾಣಿಗೆ ಇಟ್ಟ ಉರುಳಿಗೆ ಕಾಲು ಸಿಕ್ಕಿ ತುಂಡಾಗುವ ಸ್ಥಿತಿಯಲ್ಲಿದ್ದಾಗ ಊರಿನ ಜನರ ಪಶುವೈದ್ಯರ ಸಕಾಲ ಆರೈಕೆಯಿಂದ ಸುಧಾರಿಸಿ ಕೊಂಡಿತು. ಆದರೂ ಅಂದಿನಿಂದ ಅದು ಕಾಲುನೋವಿನ ಜೊತೆಗೇ ಬದುಕಲಾರಂಭಿಸಿತು. ಸದ್ಯ ಒಂದು ವರ್ಷದಿಂದೀಚೆಗೆ ಒಂದು ಕಣ್ಣಿನ ದೃಷ್ಠಿಯನ್ನೂ ಕಳೆದು ಕೊಂಡು ಮೂಕವೇದನೆಯಿಂದ ಬಳಲುತ್ತಿದ್ದರೂ ಆರ್ಲಪದವು ಪರಿಸರದ ಜನರ ಪ್ರೀತಿಯಿಂದ ಅದೇ ದೈವಸ್ದಾನ ಅಂಗಡಿ ಮರದ ನೆರಳಲ್ಲಿ ಬದುಕಲಾರಂಭಿಸಿತು. ಜನರ ಪ್ರೀತಿಯ ಮಧ್ಯೆ ತನ್ನ ನೋವನ್ನೂ ಮರೆಯತೊಡಗಿತು.
ಸದ್ಯ ವಯಸ್ಸಾದ ಪರಿಸ್ಥಿತಿ, ಮಾಗಿದ ದೇಹ, ಸಂಕಷ್ಟಕಾಲ, ಊರಿಗೆ ಊರೇ ಲಾಕ್ ಡೌನ್, ಅಂಗಡಿ ಹೊಟೇಲ್ ತೆರೆಯುವಂತಿಲ್ಲ, ರಾಜಾ ಕುಟ್ಟನಿಗೆ ಸರಿಯಾಗಿ ಆಹಾರ ಸಿಗದೆ ಮೇಯಲೂ ಆಗದೆ ದೇಹ ಬಸವಳಿಯಿತು. ಪರಿಣಾಮ ವಯೋ ಸಹಜದಿಂದ ಇಹಲೋಕ ತ್ಯಜಿಸಿತು.

ಜೂನು 24,2021 ಗುರುವಾರ ಶ್ರೀ ರಣಮಂಗಲ ಕ್ಷೇತ್ರದ ಆಡಳಿತ ಮೊಕ್ತೇಸರರೂ ಧಾರ್ಮಿಕ ಸಾಮಾಜಿಕ ಮುಂದಾಳೂಗಳೂ ಆಗಿರುವ ಶ್ರೀಕೃಷ್ಣ ಬೊಳಿಲ್ಲಾಯ ಕಡಮಾಜೆ ಅವರ ಅನುಮತಿಯಂತೆ, ಪಾಣಾಜೆ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ ಆರ್ಲಪದವು ಪಾಣಾಜೆಯ ಯುವ ಗೆಳೆಯರ ಬಳಗದವರು ದೈವಸ್ಥಾನದ ಎದುರುಕಡೆ ಜೇಸೀಬಿಯಿಂದ ಹೊಂಡ ತೆಗೆಸಿ ರಾಜಾ ಕುಟ್ಟ ಕಬಿಲನ ಮೃತದೇಹವನ್ನು ಅದರೊಳಗಿಟ್ಟು ಬಿಳಿಬಟ್ಟೆ ಹೊದೆಸಿ ಹೂ ಹಾರ ಮೇವು ಹರಶಿಣ ಹುಡಿಗಳನ್ನು ಹಾಕಿ ವಿಧಿವಿಧಾನಗಳೊಂದಿಗೆ ಯುವಕರ ತಂಡ ಅಂತ್ಯ ಸಂಸ್ಕಾರ ನೆರವೇರಿಸಿ “ರಾಜಾ ಮತ್ತೊಮ್ಮೆ ಈ ಪುಣ್ಯ ಮಣ್ಣಲ್ಲಿ ಹುಟ್ಟಿ ಬಾ…”ಎಂದು ಹಾರೈಸಿ ದು:ಖತಪ್ತರಾಗಿ ಮಣ್ಣು ಮುಚ್ಚಿ ಅಂತಿಮ ನಮನ ಸಲ್ಲಿಸಿದರು.
ಬರಹಗಾರರು: ನಾರಾಯಣ ರೈ ಕುಕ್ಕುವಳ್ಳಿ.

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh