ಚಿತ್ರಕಲೆಯಲ್ಲಿ ಜಾದುವನ್ನೇ ಮಾಡಿದಂತಹ ಅಪ್ರತಿಮ ಯುವ ಚಿತ್ರಕಲಾವಿದ ಪುತ್ತೂರಿನ ಯೋಗೀಶ್ ಕಡಂದೇಲು ಅವರ ಸಾಧನೆಯ ಹಾದಿ

        ಸಾಗರವು ಮೇಲ್ನೋಟಕ್ಕೆ ನೀಲಿಯಾಗಿ ಕೇವಲ ಒಂದೇ ಬಣ್ಣದಲ್ಲಿ ಕಂಗೊಳಿಸಿದರೂ ಅದರ ಆಳದಲ್ಲಿ ಪ್ರಕೃತಿಯು ಹೆಣೆದ ಅದೆಷ್ಟೋ ಸೌoದರ್ಯಗಳ ಲೋಕವೇ ಅಡಗಿದೆ. ಆದರೆ ಸಾಗರವು ಕೇವಲ ತನ್ನ ಅಲೆಯ ಮುಖಾಂತರ ಮಾತ್ರ ನಾಟ್ಯ ಮಾಡಿ ಸೌoದರ್ಯ ಪ್ರಿಯರನ್ನು ಆಕರ್ಷಿಸುತ್ತದೆ ಮತ್ತು ಸಂಜೆಯ ತಂಪು ತಂಗಾಳಿಯನ್ನು  ಬೀಸಿ ಎಂತಹವರನ್ನು ಕವಿಯನ್ನಾಗಿಸುತ್ತದೆ. ಹಾಗೇನೇ ನಮ್ಮ ನಡುವೆ ಇರುವ ಕೆಲವು ಕಲಾವಿದರು ತೆರೆಮರೆಯಲ್ಲೇ ಇದ್ದುಕೊಂಡು ಸಾಧಿಸುವ ಪ್ರಯತ್ನ ಮಾಡುತ್ತಿರುತ್ತಾರೆ.  ಅವರ ಆಳ ತಿಳಿದಷ್ಟು ಅವರ ಪ್ರತಿಭೆಯ ಸಾಗರವೇ ಕಾಣುತ್ತದೆ. ಅಂತಹ ಕಲಾವಿದರಲ್ಲಿ ಒಬ್ಬರಾದ ಪುತ್ತೂರು ತಾಲೂಕಿನ ಕಡಂದೇಲು ನಿವಾಸಿ ಅಪ್ರತಿಮ ಚಿತ್ರಕಲಾವಿದ ಯೋಗೀಶ್ ಕಡಂದೇಲು ಇವತ್ತು ಕೂಲ್-ಸಾಧಕರ ಕಲಾಂನಲ್ಲಿ.

         ಕಲೆ ರಕ್ತಗತವಾದ ಪ್ರತಿಭೆ.ಅದು ಚಿತ್ರ ಸಂಗೀತ ನಟನೆ ಗಾಯನ ಶಿಲ್ಪ. ಹೀಗೆ ಯಾವುದೂ ಆಗಿರಬಹುದು. ತಾಯಿಯ ಗರ್ಭದಲ್ಲೇ ಮೊಳಕೆಯೊಡೆಯುವುದು. ಮುಂದೆ ನಮಗರಿವಿಲ್ಲದಂತೆ ಬೆಳೆದು ಎಲ್ಲರ ಗಮನ ಸೆಳೆಯುವುದು,  ಅಭಿಮಾನ ಗಳಿಸುವುದು.

        ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗಡಿನಾಡು ಪ್ರದೇಶ ಪಾಣಾಜೆ-ಆರ್ಲಪದವು ಅನಾದಿಕಾಲದಿಂದಲೂ ಕಲೆ ಸಾಹಿತ್ಯ ಕೃಷಿ ಉದ್ದಿಮೆ ಭಾವೈಕ್ಯತೆಗಳಿಗೆ ಹೆಸರು ಪಡೆದ ಪ್ರಕೃತಿ ರಮಣೀಯ ಮಲೆನಾಡ ಸೆರಗಿನ ಊರು. ಇಲ್ಲಿನ ಕಡಂದೇಲು ಮನೆಯಲ್ಲಿ ಶಂಕರ ಕುಲಾಲ್ ಮತ್ತು ಶ್ರೀಮತಿ ಲಕ್ಷ್ಮೀ ಶಂಕರ್ ಇವರ ಪ್ರತಿಭಾ ಬೆಳಕಾಗಿ ಮೂಡಿಬಂದವರೇ ಯೋಗೀಶ್ ಕಡಂದೇಲು.

ತನ್ನ ಪ್ರಾಥಮಿಕ ಶಿಕ್ಷಣವನ್ನು ಶತಮಾನ ಕಂಡ ದ.ಕ.ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆಯಲ್ಲಿ ಪೂರ್ಣಗೊಳಿಸಿದ ಯೋಗೀಶರಿಗೆ ಬಾಲ್ಯದಲ್ಲಿಯೇ ಚಿತ್ರಕಲೆಯೆಂದರೆ ಅದೇಕೋ ತುಂಬಾ ಆಸಕ್ತಿ. ಇಷ್ಟ.ಬಿಂದು ಗೆರೆ ಬಣ್ಣಗಳೊಡನೆ ಬೆಳೆದ ಕಡಂದೇಲು, ಹುಟ್ಟೂರಿನ ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಕಲಿಕೆಯೊಂದಿಗೆ ಚಿತ್ರ-ಬಣ್ಣದ ಗೀಳು ಹೆಚ್ಚಾಯಿತು. ಯೋಗೀಶರ ಕನಸಿನ ಚಿತ್ರಗಳಿಗೆ ಬಣ್ಣ ನೀಡಿದವರು ಚಿತ್ರಕಲಾ ಶಿಕ್ಷಕಿ ಶಾರದಾ ಮೇಡಂ ಹಾಗೂ ಮೆಚ್ಚಿದವರು ಇತರ ಗುರುಗಳು ಸ್ನೇಹಿತರು.

     ಯೋಗೀಶ್ ಕಡಂದೇಲು ಅವರ ಶಿಕ್ಷಣ-ಕಲಾಪಯಣ ಮುಂದೆ ಸಾಗುತ್ತದೆ. ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ಮುಗಿಸಿದ ಇವರಿಗೆ ಚಿತ್ರಕಲಾ ರಚನೆಯ ಮೇಲೆ ಆಸಕ್ತಿ ಹೆಚ್ಚಾಗುತ್ತದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಾನಸ ಗಂಗೋತ್ರಿ ಮೈಸೂರು ಇಲ್ಲಿ ಅಭ್ಯಸಿಸಿ B.F.A(Bachelor of Fine Arts) ಪದವಿ ಪಡೆಯುತ್ತಾರೆ. ಕಲಾಸಕ್ತಿ ಹೆಚ್ಚಿದಂತೆ ಕಲೆಗಳ ಆಗರ ಮೈಸೂರಿನ ಲಲಿತ ಕಲಾ ಮಹಾ ಸಂಸ್ಥಾನದಿಂದ  D.M.S ಉನ್ನತ ಪದವಿ ಪಡೆದು ವರ್ಣ ಚಿತ್ರ ಕಲೆಯಲ್ಲಿ ಜಾದುವನ್ನೇ ಮಾಡಿದ ಯುವ ಕಲಾವಿದರಾಗಿ ಜನಮೆಚ್ಚುಗೆ ಪಡೆದ ಚಿತ್ರಕಲಾವಿದರಿವರು. ವಿದ್ಯಾರ್ಥಿ ದೆಸೆಯಲ್ಲಿ ಅನೇಕ ಕಡೆಯಲ್ಲಿ ಬಹುಮಾನ ಗೌರವ ಸ್ವೀಕರಿಸಿದ ಯೋಗೀಶ್ ಕಡಂದೇಲು ನಗುಮೊಗದ ಮಿತಭಾಷಿ. ಮೌನ ಸಾಧಕ.

      ಪ್ರಕೃತಿ ಚಿತ್ರಕಲಾವಿದನಾಗಿ, ವೇದಿಕೆ ವಿನ್ಯಾಸಗಾರನಾಗಿಯೂ ಗಡಿನಾಡಿನ ಕರಾವಳಿಯ ಯುವ ಪ್ರತಿಭೆ ಯೋಗೀಶ್ ಕಡಂದೇಲು ಅಪಾರ ಜನಮನ್ನಣೆ ಪಡೆದಿದ್ದಾರೆ.

       ಕಲಾವಿದ ಯೋಗೀಶ್ ಕಡಂದೇಲು ಅವರು ಚಿತ್ರಿಸಿರುವ  ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಿ.ವೀರೇಂದ್ರ ಹೆಗ್ಗಡೆ, ಶ್ರೀ ರವಿಶಂಕರ್ ಗುರೂಜಿ, ಶಿಲಾಬಾಲಿಕೆ, ದರ್ಪಣ ಸುಂದರಿ, ದೇವಿ, ಹಳ್ಳಿಯ ಪರಿಸರ, ಡಾ.ಶಿವರಾಮ ಕಾರಂತ ಹಾಗೂ ಅನೇಕ ನಾಟಕ-ಚಲನ ಚಿತ್ರ. ಇತ್ಯಾದಿ ಕಲಾವಿದರ ರಚನೆಯ ಚಿತ್ರಗಳು ಜೀವಂತಿಕೆಯಿಂದ ಕೂಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಇವರ ಹೆಚ್ಚಿನ ಎಲ್ಲಾ ಚಿತ್ರಕಲೆಯನ್ನು ಅವರ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಫೇಸ್ಬುಕ್ ಖಾತೆಯನ್ನು ಲಿಂಕ್ ನ್ನು ಕೆಳಗೆ ನೀಡಲಾಗಿದೆ. ಓದುಗರು ಆಸಕ್ತರು ಭೇಟಿಯಾಗಬಹುದು.

     ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಚಿತ್ರ ಬಿಡಿಸಿ ಅವರಿಗೆ ಅರ್ಪಿಸಿ ಹೆಗ್ಗಡೆಯವರ ಅಭಿಮಾನಕ್ಕೆ ಪಾತ್ರರಾಗಿರುವ ಹೆಮ್ಮೆಯ ಚಿತ್ರಕಲಾವಿದ ಯೋಗೀಶ್ ಕಡಂದೇಲು, ಮಠದ ಸ್ವಾಮೀಜಿಗಳಿಂದ, ಅನೇಕ ಸಂಘ ಸಂಸ್ಥೆಗಳಿಂದಲೂ ಗೌರವಕ್ಕೆ ಪಾತ್ರರಾಗಿರುವರು.

        ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಸರೆಯಲ್ಲಿ 2015 ರಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಾಲಯ ವಠಾರದಲ್ಲಿ ನಡೆದ 20ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರ ವಿಭಾಗದ ಅಂಚೆಕಾರ್ಡಿನಲ್ಲಿ ಚಿತ್ರ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ಹಿರಿಮೆಗೆ ಪಾತ್ರರಾದ ಯೋಗೀಶ್ ಕಡಂದೇಲು ಅವರಿಗೆ ಮುಂದಿನ ದಿನಗಳಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಜ್ಯ ರಾಷ್ಟ್ರದ ಗೌರವಗಳು ಒಲಿದು ಬರಲೆಂದು ಹಾರೈಸೋಣ.

      “ಕಲೆಗೆ ಮಣಿಯದ ಮನಸ್ಸೇ ಇಲ್ಲ. ಕಲೆ ಒಲಿದರೆ ಸೋಲೇ ಇಲ್ಲ.”

ಈ ಅದ್ಭುತ ಕಲಾವಿದನಿಗೊಂದು ನಿಮ್ಮ ಪ್ರೋತ್ಸಾಹದ ನುಡಿ ಇರಲಿ –

ಮೊಬೈಲ್ ಸಂಖ್ಯೆ –  9740965440 

ಫೇಸ್ಬುಕ್ ಖಾತೆ –    facebook.com/yogeeshkadandelu

ಬರಹ : ನಾರಾಯಣ ರೈ ಕುಕ್ಕುವಳ್ಳಿ. ಪ್ರಧಾನ ಸಂಪಾದಕರು ಮಧುಪ್ರಪಂಚ ಪುತ್ತೂರು.ದಕ. 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ