ಈ ಸೃಷ್ಟಿ ಇರುವುದು ನಮ್ಮೆಲ್ಲರ ಬದುಕಿಗಾಗಿ. ಆದರೆ ನಾವು ಮಾತ್ರ ಇದರ ಯಜಮಾನರಲ್ಲ – ಹಸಿರು ಮಾತು – ನಾರಾಯಣ ರೈ ಕುಕ್ಕುವಳ್ಳಿ

ಹಸಿರು ಮಾತು.

ಹಸಿರು ಬೇಕು 

ಉಸಿರಾಡಲು ಜೀವ-

ಕೋಟಿಗಳೆಲ್ಲ….!!!

        ನವಗ್ರಹಗಳಲ್ಲಿ ಜೀವಜಲ ಪ್ರಾಣವಾಯು. ಹೀಗೆ ಬದುಕಿಗೆ ಪೂರಕವಾದ ಪಂಚಭೂತಗಳಿರುವ ಗ್ರಹ ಇರುವ ಏಕೈಕ ಗ್ರಹ ಈ ನಮ್ಮ ಭೂಮಿ. ಧರೆ ಎನ್ನೋಣ. ಧರಿತ್ರಿ ಎನ್ನೋಣ. ಪೃಥ್ವಿ-ಅವನಿ ಎನ್ನೋಣ. ಅದು ನಾವು ಭೂಮಿ ತಾಯಿಯನ್ನು ಕರೆಯುವ ಪ್ರಜ್ಞಾವಂತ ಜನರ ಮಾತು. ಆದರೆ ಹೇಗಿದೆ ಈ ಧರೆ…?

  ಕಾಡು ನಾಶವಾಗಿದೆ, ಸಮುದ್ರ ಅಬ್ಬರಿಸುತ್ತಿದೆ, ಸುನಾಮಿ, ತೌಕ್ತೆ, ಯಾಸ್ ಇನ್ನು ಏನೇನೋ ಹೆಸರಿನ ಚಂಡಮಾರುತಗಳು ಅಕಾಲಿಕ ಮಳೆ, ಪ್ರವಾಹ, ಕರಗುತ್ತಿದೆ ಮಂಜು, ಭೂಕುಸಿತ ಅದರೊಂದಿಗೆ ನಮ್ಮ ಮೂಲೆ ಸೇರಿಸಿದ ಅಗೋಚರ ವೈರಾಣು ರೂಪಾಂತಕಾರಿ ಕಂಟಕ. ಇವುಗಳಿಗೆಲ್ಲ ಕಾರಣ ನಾವಲ್ಲ ಅಂದುಕೊಳ್ಳುತ್ತಾ ಬೇರೆ ಕಡೆ ಬೆರಳು ತೋರೋ ಬುದ್ಧಿವಂತರು ನಾವಾಗಿದ್ದೇವೆ. ಇದೀಗ ನಮ್ಮ ಬುಡಕ್ಕೇ ಬಂದಾಗ ಮೂಗು-ಬಾಯಿ ಮುಚ್ಚಿಕೊಂಡು ಅಂತರದೊಂದಿಗೆ ಎಲ್ಲಾ ಬಾಂಧವ್ಯಗಳಿಂದ ದೂರವಾಗುತ್ತಿದ್ದೇವೆ. ಕೋಟಿ ಹಣ, ಒಡವೆ, ಆಸ್ತಿ ಇದ್ದರೂ ಪ್ರಾಣವಾಯುವಿಗೆ ಮೊರೆಯಿಡುತ್ತಿದ್ದೇವೆ.

       ಭೂಮಿಯ ತಾಪ ಹೆಚ್ಚಾಗುತ್ತಿದೆ. ನಾಡು ಬರಡಾಗಿ ಮುಗಿಲೆತ್ತರ ಕಟ್ಟಡಗಳು ಎದ್ದು, ಕಾಂಕ್ರೀಟೀಕರಣಗೊಂಡು ಭೂಮಿ ಇಂದು ನಮಗೇ ಸವಾಲಾಗಿ ನಿಂತಿದೆ. ನೀರು ಇಂಗೋದಿಲ್ಲ. ನದಿಗಳು ತುಂಬಿ ಹರಿಯೋದಿಲ್ಲ. ಹೂಳೇ ತುಂಬಿ ಹೋಗಿದೆಯಲ್ಲ.

          ಈ ಸೃಷ್ಟಿ ಇರುವುದು ನಮ್ಮೆಲ್ಲರ ಬದುಕಿಗಾಗಿ. ನಾವು ಮಾತ್ರ ಇದರ ಯಜಮಾನರಲ್ಲ. ಸಕಲ ಚರಾಚರ ಜೀವಿ-ವಸ್ತುಗಳ ನೆಲೆ ಆಸರೆ ಈ ಧರೆ. ಇಂದು ನಾವು ಎದುರಿಸುತ್ತಿರುವ ಸವಾಲುಗಳು, ಜೀವ-ಜೀವನಕ್ಕೆ ಎದುರಾದ ಸಂಕಷ್ಟಗಳನ್ನೆಲ್ಲ ಗಮನಿಸಿದಾಗ ನಾವೆಷ್ಟು ಕ್ಷುಲ್ಲಕರು ಎಂದು ಅರಿವಾಗದೆ ಬಿಡದು.

   ನಾವು ವಿಶ್ವ ಪರಿಸರ ದಿನದ ಸುವರ್ಣ ಘಳಿಗೆಯ ಹೊಸ್ತಿಲಲಿ ಆಕಾಶ ನೋಡಿ ನಿಂತಿದ್ದೇವೆ. ಹೊರಗೆ ಹೋಗುವಂತಿಲ್ಲ. ಯಾರೊಡನೆಯೂ ಸಂಪರ್ಕವೂ ಇಲ್ಲ. ಯಾಕೆ ಹೀಗಾಯಿತು? ಅಣಕಿಸುವ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು?

       1972-73ರಲ್ಲಿ ವಿಶ್ವಸಂಸ್ಥೆಯ 150ಕ್ಕಿಂತಲೂ ಹೆಚ್ಚಿನ ರಾಷ್ಟ್ರಗಳು ಅಮೇರಿಕಾ ಸಂಯುಕ್ತ ಸಂಸ್ಥಾನದ ಸ್ಟಾಕ್ ಹೋಂನಲ್ಲಿ ಸಭೆ ಸೇರಿ ಪರಿಸರದ ಉಳಿವಿನ ಕಡೆಗೆ ಇಡೀ ವಿಶ್ವವೇ ಜಾಗ್ರತಗೊಳ್ಳಬೇಕು, ಇರುವುದೊಂದೇ ಭೂಮಿ, ಅದು ನಮಗೆಲ್ಲರಿಗಾಗಿ ಎಂಬಿತ್ಯಾದಿ ಚಿಂತನ-ಮಂಥನಗಳಾದವು. 1974ರಿಂದ ಜೂನ್ 5ರಂದು ವಿಶ್ವಪರಿಸರ ದಿನ ಆಚರಿಸಿ ಜನಜಾಗ್ರತಿ ಮೂಡಿಸಲು ಕರೆ ನೀಡಿತು. ಆದರೆ ನಾವಿಂದೂ ಎಚ್ಚರಗೊಂಡಿಲ್ಲ. ಪರಿಸರದ ಮೇಲಿನ ನಮ್ಮ ಅಧಿಕಾರ ಸ್ವಾರ್ಥ ದಾಹ ಇನ್ನೂ ಕಡಿಮೆಯಾಗಿಲ್ಲ. ಒಂದು ಕಡೆ ವನಮಹೋತ್ಸವ, ಹಲವು ಕಡೆ ಒಣ ಹಾಹಾಕಾರ. ಅತೀವೃಷ್ಠಿ-ಅನಾವೃಷ್ಠಿ. ತಾಪಮಾನ ಮಿತಿಮೀರಿದೆ. ಆಮ್ಲಜನಕಕ್ಕಾಗಿ ಉಸಿರು ಬಿಗಿಹಿಡಿದು ಕೈ ಚಾಚುವ ಪರಿಸ್ಥಿತಿ. ಜನಜೀವನಕ್ಕಾಗಿ ವನಗಳ ಮಾರಣಹೋಮ ನಡೆಯುತ್ತಿದೆ. ಬದುಕಿಗಾಗಿ ಹೋರಾಟ. ಇರುವುದೊಂದೇ ಭೂಮಿ. ಅದು ಹಸಿರು ಹಸಿರಾಗಿರಬೇಕಾದರೆ ಈ ಪರಿಸರಕ್ಕಾಗಿ ನಾವೇನಾದರೂ ತ್ಯಾಗ ಮಾಡಲೇ ಬೇಕಾಗಿದೆ. ಎಚ್ಚರಗೊಳ್ಳೋಣ. ಜಾಗ್ರತರಾಗೋಣ. ಇಂದೇ ಒಂದು ಗಿಡ ನೆಡೋಣ.  ಗಿಡಗಳನ್ನೂ ನೆಡಲು ಪರಿಸರ ದಿನವನ್ನೇ ಕಾಯಬೇಕೆಂದೇನಿಲ್ಲ. ನಾವು ಯಾವಾಗ ಗಿಡ  ನೆಡುತ್ತೇವೆಯೋ ಅಂದೇ ನಮಗೆ ಪರಿಸರ ದಿನ.  ಮತ್ತು ಪ್ರಕೃತಿ ಮಾತೆಗೆ ಅದೇ ಹಬ್ಬದ ದಿನ.  ಹಸಿರ ಉಳಿಸೋಣ. ಉಸಿರ ಹೊಂದೋಣ. ಪರಿಸರ ಮಾತೆಗೆ ನಮಿಸೋಣ. 

ಲೇಖಕರು –  ನಾರಾಯಣ ರೈ ಕುಕ್ಕುವಳ್ಳಿ.

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ