ಆಟೋ ಚಾಲಕನಾಗಿ ದುಡಿಯುತ್ತ ಬಣ್ಣದ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ, ಪುತ್ತೂರಿನ ಯುವ ಪ್ರತಿಭೆ ಅನಿಲ್ ರೈ ಪೆರಿಗೇರಿ.

 

            ಚಿಟ್ಟೆ ತಾನು ಒಂದೇ ದಿನ ಬದುಕುವುದಾದರೂ ಸಾವಿರ ಕನಸುಗಳನ್ನು  ಕಟ್ಟಿ ಅದೆಷ್ಟೋ ಸಸ್ಯ ಸಂಕುಲಕ್ಕೆ ಜೀವನದ ಅರ್ಥವನ್ನು ತಂದುಕೊಟ್ಟು ಜೀವನವನ್ನು ಶೃಂಗರಿಸುತ್ತದೆ. ಹಾಗೆಯೇ ನಾವು ಕೂಡಾ ಜೀವನದಲ್ಲಿ ಸಿಕ್ಕ ಸಮಯಾವಕಾಶವನ್ನು ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಜೀವನಕ್ಕೆ ಅರ್ಥ ಕಲ್ಪಿಸಿಕೊಂಡು ಸಾಧನೆಯ ಪಥದಲ್ಲಿ ನಡೆಯಬೇಕು. ಅಂತಹ ಒಬ್ಬ ನಯ ವಿನಯದ, ಸಮಯಕ್ಕೆ ಪ್ರಾಮುಖ್ಯತೆ ಕೊಡುವ ಪ್ರಾಮಾಣಿಕ ವ್ಯಕ್ತಿ ಈ “ಅನಿಲ್ ರೈ ಪೆರಿಗೇರಿ” ಕೂಲ್ ಸಾಧಕರ ಕಾಲಂನಲ್ಲಿ.

          ಇವರು ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ, ಬಡಗನ್ನೂರು  ಗ್ರಾಮದ, ಪೆರಿಗೇರಿ ಶ್ರೀಮತಿ ಲಲಿತಾ ರೈ ಮತ್ತು ಪುರಂದರ ರೈ ದಂಪತಿಗಳ ಪುತ್ರನಾಗಿ 07/12/1990ರಂದು ಜನಿಸಿದರು. ಇವರಿಗೆ ಒಬ್ಬರು ಅಕ್ಕ ಯಶುಭ ಗಿರೀಶ್‌ ರೈ.

      ಇವರು ತನ್ನ ಪ್ರಾಥಮಿಕ ಶಿಕ್ಷಣದ ಒಂದು ಮತ್ತು ಎರಡನೇ ತರಗತಿಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆ, ಪುತ್ತೂರು ಮತ್ತು ಮೂರರಿಂದ ಏಳನೇ ತರಗತಿಯ ವರೆಗೆ ಮತ್ತು ಪ್ರೌಢ   ಶಿಕ್ಷಣವನ್ನು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೆಯ್ಯಂಡಾಣೆ ಮಡಿಕೇರಿ ಮತ್ತು ಐಟಿಐ ತರಬೇತಿಯನ್ನು ಕೆ.ಪಿ.ಟಿ.ಸಿ.ಎಲ್‌ ಮಂಗಳೂರಿನಲ್ಲಿ ಮುಗಿಸಿರುತ್ತಾರೆ. ಈಗ ಸೇಲ್ಸ್ ರೆಫ್ ಮತ್ತು ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

         ಇವರಿಗೆ ತನ್ನ ಬಾಲ್ಯದಲ್ಲಿ ಕಲೆಯಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ಆದರೆ, ತನ್ನ ಗೆಳೆಯರೆಲ್ಲ ವೇದಿಕೆಯಲ್ಲಿ ನಟನೆ ಮಾಡುವುದನ್ನು ನೋಡಿ ತಾನು ಕೂಡ ವೇದಿಕೆ ಏರಬೇಕೆಂಬ ಕನಸನ್ನು ಕಂಡಿದ್ದರು. ಆದರೆ, ಅಂತಹ ಅವಕಾಶಗಳು  ಇದ್ದರೂ ವೇದಿಕೆಗೆ ಏರುವ ಧೈರ್ಯ ಇರಲಿಲ್ಲ. ಧೈರ್ಯ ತುಂಬಿಸುವವರು ಕೂಡ ಯಾರೂ ಇರಲಿಲ್ಲ. ಹಾಗಾಗಿ ತನ್ನ ಕನಸನ್ನು ಹಾಗೆಯೇ ಬಚ್ಚಿಟ್ಟಿದ್ದರು.  ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಒಂದು ದಿನ ಸಿಲಿಕಾನ್‌ ಎಂಟರ್‌ ಪ್ರೈಸಸ್‌ನಲ್ಲಿ ಕೆಲಸ ಮಾಡುವ ಸಮಯದಲ್ಲಿ ಅದೃಷ್ಟವೆಂಬಂತೆ ರಂಗ ಕಲಾವಿದರಾದ “ಸುಬ್ಬು ಸಂಟ್ಯಾರ್‌” ತನಗೆ  ನಾಟಕದಲ್ಲಿ ಒಂದು ಪಾತ್ರವನ್ನು ಅಭಿನಯಿಸಬಹುದಾ? ಎಂದು ಕೇಳುತ್ತಾರೆ. ಆಗ ತನಗೊಂದು ಚಿಕ್ಕ ಪಾತ್ರ ಸಿಕ್ಕರೆ ಖಂಡಿತ ಮಾಡುತ್ತೇನೆ ಎಂದು ಹೇಳುತ್ತಾರೆ. ಅಲ್ಲಿಂದ ಶುರುವಾದ ಇವರ ಒಡನಾಟದಿಂದ “ಸುಬ್ಬು” ಅವರದ್ದೇ ನಿರ್ದೇಶನದ “ಶರತ್‌ ಆಳ್ವ” ಸಾರಥ್ಯದ “ಬೊಳ್ಳಿ ಬೊಲ್ಪು ಕಲಾವಿದರು ಪುತ್ತೂರು” ಎಂಬ ತಂಡದಲ್ಲಿ “ಮಂಡೆ ಹಾಕೊರ್ಚಿ” ಎಂಬ ತುಳು ನಾಟಕದಲ್ಲಿ ಸುಮತಿ ಎಂಬ ಸ್ತ್ರೀ ಪಾತ್ರದೊಂದಿಗೆ ಬಣ್ಣ ಹಚ್ಚಿ ರಂಗಭೂಮಿಗೆ ಮೊದಲ ಹೆಜ್ಜೆ ಇಟ್ಟರು. ನಂತರ “ಪಚ್ಚು ಪಾತೆರೊಡು”, “ಮರ್ಲ್‌ ಕಟ್ಟೊರ್ಚಿ”, “ಕಾಸ್‌ದ ಕಸರತ್”, “ಸೀತೆ ಸೋತೆಗೆ” ನಾಟಕಗಳಲ್ಲಿ ಅಭಿನಯಿಸಿರುತ್ತಾರೆ.

             ಇವರು ಬಡ ಕುಟುಂಬದಲ್ಲಿ ಜನಿಸಿದ ಕಾರಣ ಮತ್ತು ತಂದೆ ಮಡಿಕೇರಿಯಲ್ಲಿ ಕೂಲಿ ಕಾರ್ಮಿಕರಾದ ಕಾರಣ ತಾಯಿ ಮತ್ತು ಅಕ್ಕ ಮಡೀಕೇರಿಯಲ್ಲಿ ಇದ್ದರು ಮತ್ತು ಇವರು ಅಜ್ಜಿ ಮನೆಯಲ್ಲಿ ಒಂದು ಮತ್ತು ಎರಡನೇ ತರಗತಿಯನ್ನು ಮುಗಿಸಿ, ನಂತರ ಮಡಿಕೇರಿಯಲ್ಲೇ ವಿದ್ಯಾಭ್ಯಾಸದ ಜೊತೆಗೆ ಕಾಫಿ ತೋಟದ ಕೆಲಸಕ್ಕೆ ಹೋಗಿ ಪ್ರೌಢ ಶಿಕ್ಷಣ ಮುಗಿಸಿದರು. ಶಿಕ್ಷಣವನ್ನು ನಿಲ್ಲಿಸಿ ಮಡಿಕೇರಿಯಲ್ಲೆ ವಾಹನದ ಬಿಡಿ ಭಾಗಗಳ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಜೀವನದ ದಾರಿಯನ್ನು ನಡೆಸುತ್ತಿದ್ದರು. ನಂತರ ಪುತ್ತೂರಿನ ಪೆರಿಗೇರಿಯಲ್ಲಿ ಇರುವ ತನ್ನ ಅಮ್ಮನ ಆಸ್ತಿಯ ಪಾಲಿನಲ್ಲಿ ಮನೆ ಕಟ್ಟಬೇಕು ಎಂಬ ಹಠ ತೊಟ್ಟು, ಅಜ್ಜಿ ಮನೆಗೆ ಬಂದು ಉಳಿದುಕೊಂಡು “ಸಿಲಿಕಾನ್ ಎಂಟರ್ಪ್ರೈಸಸ್” ಎಂಬ ಸಂಸ್ಥೆಯಲ್ಲಿ ಸೇಲ್ಸ್ ರೆಫ್ ಆಗಿ ಸೇರಿಕೊಂಡು ವಾರದಲ್ಲಿ ಎರಡು ದಿನ ಮಂಗಳೂರಿನಲ್ಲಿ  ಐಟಿಐ ಕಲಿತು, ರಜಾದಿನಗಳಲ್ಲಿ ಕಲ್ಲು ಲೋಡಿಂಗ್ ಗೆ ಹೋಗಿ, ಒಂದು ಸುಂದರ ಮನೆಯನ್ನು ಕಟ್ಟಿ, ನಂತರ ತಂದೆ ತಾಯಿಯರನ್ನು ಕೂಡ ಊರಿಗೆ ಕರೆಸಿಕೊಂಡು, ತನ್ನ ಅಕ್ಕನ ಮದುವೆಯನ್ನು ಕೂಡ ಮಾಡುತ್ತಾರೆ. ಜೀವನ ಮತ್ತು ಜೀವನ ಕಟ್ಟಿಕೊಳ್ಳುವ ಬಗೆಯನ್ನು ಚೆನ್ನಾಗಿ ಅರಿತಿರುವ ಇವರು ಒಂದು ಆಟೋ ಖರೀದಿಸಿ ದುಡಿಯುವುದರ ಜೊತೆಗೆ “ಸಿಲಿಕಾನ್ ಎಂಟರ್ಪ್ರೈಸಸ್”ನಲ್ಲಿ ಸೇಲ್ಸ್ ಮ್ಯಾನ್ ಆಗಿಯೂ ದುಡಿಯುತ್ತಾ, ಕಲಾ ಪೋಷಕರಾಗಿಯೂ ಮಿಂಚುತ್ತಿದ್ದಾರೆ. ಸದ್ಯದಲ್ಲೇ ಮದುವೆಯ ಯೋಚನೆಯಲ್ಲಿ ಇರುವ ಇವರು, ಇವರಿಗೆ ಹೊಂದುವ ಹುಡುಗಿಯ ಹುಡುಕಾಟದಲ್ಲಿ ಇದ್ದಾರೆ..

            ಇವರು ನಾಟಕ ಮಾತ್ರವಲ್ಲದೆ ಸಿನಿಮಾ ರಂಗದಲ್ಲಿ ಮಿಂಚಬೇಕು ಎಂಬ ಕನಸಿನಂತೆ ತನ್ನ ಆತ್ಮೀಯ ಸ್ನೇಹಿತ ಮತ್ತು ಜೊತೆ ಕಲಾವಿದರಾದ “ರಂಜು ರೈ ಸುಳ್ಯ” ಇವರ ಮುಖಾಂತರ “ಮೇಲೊಬ್ಬ ಮಾಯಾವಿ” ಎಂಬ ಕನ್ನಡ ಚಿತ್ರದಲ್ಲಿ ಮೊದಲನೆಯದಾಗಿ ಅಭಿನಯಿಸುತ್ತಾರೆ. ನಂತರ ಚಂದನ ವಾಹಿನಿಯಲ್ಲಿ ಪ್ರಸಾರವಾದ “ಕಟೀಲು ಶ್ರೀದೇವಿ ಚರಿತೆ” ಎಂಬ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಲ್ಲದೆ “ಕಾಳಿ” ಎಂಬ ಕಿರುಚಿತ್ರದಲ್ಲಿ ಮತ್ತು “ಪಿರ್ಕಿಲು” ಎಂಬ ತುಳು ಚಲನಚಿತ್ರದಲ್ಲಿ ಒಂದು ವಿಭಿನ್ನವಾದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. “ಗುಬ್ಬಚ್ಚಿ” ಎಂಬ ಟೆಲಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮೂರು ಚಲನಚಿತ್ರಗಳು ಶೂಟಿಂಗ್ ಹಂತದಲ್ಲಿದೆ. ನಟನೆಯ ಜೊತೆಗೆ ಕ್ಯಾಮೆರಾ ದಲ್ಲೂ ಆಸಕ್ತಿ ಇರುವ ಇವರು ಹಲವಾರು ವೇದಿಕೆಗಳಲ್ಲಿ ಕ್ಯಾಮೆರಾ ಮೆನ್ ಆಗಿಯೂ ಕೆಲಸ ಮಾಡಿದ್ದಾರೆ.

             ಒಂದು ದಿನ ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ ಇವರು ಮತ್ತೆ ಇವರ ಆತ್ಮೀಯ ಮಿತ್ರ “ರಂಜು ರೈ ಸುಳ್ಯ” ಇವರೊಂದಿಗೆ ಹೊರಟಾಗ, ಅಲ್ಲಿ ಇವರ ಊರಿನವರೇ ಆದ “ಸಾಯಿ ದೀಕ್ಷಿತ್ ಪುತ್ತೂರು” ಇವರ ಪರಿಚಯವಾಯಿತು. ಮೊದಲೇ “ಬಲೆತೆಲಿಪಾಲೆ” ಕಾರ್ಯಕ್ರಮಕ್ಕೆ ಪ್ರವೇಶ ಮಾಡಬೇಕು ಎಂದು ಕನಸು ಹೊಂದಿದ್ದ ಇವರಿಗೆ “ಸಾಯಿ ದೀಕ್ಷಿತ್ ಪುತ್ತೂರು” ಅವರೊಂದಿಗೆ ಸ್ನೇಹ ಬೆಳೆದು, ನಂತರದ ದಿನಗಳಲ್ಲಿ ಇವರೊಂದಿಗೆ “ಸಾಯಿ ಶೃಂಗಾರ ಪುತ್ತೂರು” ತಂಡದೊಂದಿಗೆ “ನಮ್ಮ ಟಿವಿ” ಚಾನೆಲ್ ನ “ಬಲೆತೆಲಿಪಾಲೆ ಸೀಸನ್ 7″ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಫೈನಲಿಸ್ಟ್ ಆಗಿ ಹೊರಬಂದಿರುವುದು ಇವರಿಗೆ ಸಂತಸದ ವಿಚಾರವಾಗಿದೆ. ಮುಂದೆ “ಸಾಯಿ ಶೃಂಗಾರ” ಅರ್ಪಿಸುವ “ಮಕ್ಕರ್” ತಂಡದಲ್ಲಿ ಹಲವಾರು ಕಡೆ ಕಾಮೆಡಿ ಶೋಗಳನ್ನು ಮಾಡಿ ಕಲಾರಸಿಕರ ಮನಸೆಳೆದು ಹೆಸರುವಾಸಿಯಾಗಿದ್ದಾರೆ. ಅದರಲ್ಲೂ ಇವರಿಗೆ ಸಕ್ಲೇಶ ಪುರದಲ್ಲಿ ಮಾಡಿದ “ಮಕ್ಕರ್ ಕನ್ನಡ ಕಾಮೆಡಿ ಶೋ” ಮತ್ತು ಅಲ್ಲಿಯ ಜನರ ಅಭಿಮಾನ ಇವರಿಗೆ ಮರೆಯದ ಬುತ್ತಿಯಾಗಿದೆ.  ಪ್ರಸ್ತುತ ಮಕ್ಕರ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ನ ಕಾರ್ಯಕ್ರಮಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

               ಜೀವನದಲ್ಲಿ ಕಷ್ಟಗಳನ್ನು ಎದುರಿಸದ ವ್ಯಕ್ತಿ ಇರಲ್ಲ. ಇವರು ಅನುಭವಿಸಿದ ಕಷ್ಟಗಳೆಲ್ಲವೂ ಇವರಿಗೆ ಅನುಭವಗಳನ್ನು ನೀಡಿದೆ ಅದಕ್ಕಾಗಿ ಇವರು ಇಷ್ಟೆಲ್ಲಾ ಸಾಧನೆಯ ಹಾದಿಯಲ್ಲಿ ಮಿಂದು ಬರಲು ಸಾಧ್ಯವಾಯಿತು ಎಂದು ಹೇಳುತ್ತಾರೆ. ಇವರ ಜೀವನದಲ್ಲಿ ಇನ್ನಷ್ಟು ಸಾಧನೆಗಳ ಶಿಖರವನ್ನು ಏರುವಂತಾಗಲಿ, ಸಂತಸ ಸಡಗರ ಮನೆಮಾಡಲಿ ಎಂದು ಆಶಿಸೋಣ.

ನಮ್ಮ ಕಲಾವಿದರು ನಮ್ಮ ಹೆಮ್ಮೆ

ಬರಹ : ರಂಜಿನಿ_ಬಂಗೇರ_ಕಳಂಗಜೆ



Leave a Comment