ದಿನಾ ನಾವು ಬಳಸುವ ಏಲಕ್ಕಿ ನಮ್ಮ ಆರೋಗ್ಯಕ್ಕೆ ಎಷ್ಟು ಉಪಕಾರಿ ಎಂದು ನೀವು ಬಲ್ಲಿರಾ?

    ಹೌದು, ನಾವು ಅಡುಗೆ  ಮನೆಯಲ್ಲಿ ಬಳಸುವ ಪ್ರತಿ ಅಡುಗೆ ಪದಾರ್ಥಗಳು ಆಯುರ್ವೇದದ ದೃಷ್ಟಿಯಲ್ಲಿ ನಮ್ಮ ಆರೋಗ್ಯಕ್ಕೆ ಬಹಳ ಉಪಕಾರಿಯಾದದ್ದು ಮತ್ತು ಪರಿಣಾಮಕಾರಿಯಾದದ್ದು. ಸಾಸಿವೆ, ಗೋಡಂಬಿ, ಹೆಸರು ಬೇಳೆ, ಏಲಕ್ಕಿ, ರಾಗಿ, ಗೋಧಿ, ಅರಸಿನ, ಸುಂಠಿ, ಅಕ್ಕಿ, ಲವಂಗ, ಕೊಬ್ಬರಿ ಎಣ್ಣೆ, ನಿಂಬೆ, ಈರುಳ್ಳಿ , ಕರಿ ಮೆಣಸು, ಬೆಳ್ಳುಳ್ಳಿ ಹೀಗೆ ಪಟ್ಟಿ ಮಾಡುತ್ತಾ ಹೊರಟರೆ ತುಂಬಾನೇ ಇದೆ. 

    

 

    ಅದಕ್ಕಾಗಿಯೇ ಹಿರಿಯರು ಭಾರತದ ಪ್ರತೀ ಅಡುಗೆ ಮನೆಯು ಆಯುರ್ವೇದದ ಗೂಡು ಎಂದು ಹೇಳಿರುವುದು. ಸರಿ ಇಲ್ಲಿ ನಾವು ಏಲಕ್ಕಿಯ ಕುರಿತಾಗಿ ಒಂದಷ್ಟು ಮಾಹಿತಿ ತಿಳಿಯೋಣ. ಮತ್ತು ಏಲಕ್ಕಿ ನಮ್ಮ ಆರೋಗ್ಯಕ್ಕೆ ಎಷ್ಟು ಪರಿಣಾಮಕಾರಿ ಎಂದು ಅರಿಯೋಣ. 

 

    ಸ್ನೇಹಿತರೆ ಏಲಕ್ಕಿ ಬಗ್ಗೆ  ಯಾರಿಗೆ ಗೊತ್ತಿಲ್ಲ ಹೇಳಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಏಲಕ್ಕಿ ಸಣ್ಣದಾದರೂ ಅದರ ಉಪಯೋಗಗಳು ಬಹಳಷ್ಟಿದೆ. ಏಲಕ್ಕಿಯನ್ನು ನಾವು ಸಾಮಾನ್ಯವಾಗಿ ಆಹಾರದ ಸ್ವಾದ ಹೆಚ್ಚಿಸಲು ಮತ್ತು ಪರಿಮಳಕ್ಕಾಗಿ ಬಳಸಿಕೊಳ್ಳುವುದು ಗೊತ್ತಿರುವಂಥಹದ್ದು. ಆದರೆ ಆರೋಗ್ಯದ ದೃಷ್ಟಿಯಿಂದ ನೋಡಿದರೆ ಏಲಕ್ಕಿ ಹಲವು ರೋಗಗಳಿಗೆ ರಾಮಬಾಣವಾಗಿದೆ. ಹಲವಾರು ಔಷಧೀಯ ಗುಣ ಹೊಂದಿರುವ ಏಲಕ್ಕಿ ಆಯುರ್ವೇದದ ದೃಷ್ಟಿಯಲ್ಲಿ ಶ್ರೇಷ್ಠ ಕೂಡ ಎನಿಸಿಕೊಂಡಿದೆ. 

    

 

ಏಲಕ್ಕಿಯಿಂದ ನಮ್ಮ ಆರೋಗ್ಯಕ್ಕೆ ಹೇಗೆ ಉಪಕಾರಿ ಎಂದು ಕೆಲವೊಂದು ಉಪಯುಕ್ತ ಮಾಹಿತಿಯನ್ನು ಇಲ್ಲಿ ಪಟ್ಟಿ ಮಾಡುತ್ತೇನೆ :

 

  • 👉 ಏಲಕ್ಕಿಯ ಒಂದೆರಡು ಕಾಳುಗಳನ್ನು ಬಾಯಿಗೆ ಹಾಕಿ ಸ್ವಲ್ಪ ಹೊತ್ತು ಜಗಿಯುವುದರಿಂದ ಬಾಯಿಯ ದುರ್ವಾಸನೆಯನ್ನು ಕಡಿಮೆಮಾಡಿಕೊಳ್ಳಬಹುದು. 
 
  • 👉 ಭೇದಿ ಸಮಸ್ಯೆಯಾದಲ್ಲಿ ಏಲಕ್ಕಿ ಕಾಯಿ ಬೀಜದ ಪುಡಿಯನ್ನು ಬಿಸಿ ಬಿಸಿ ಚಹಾಕ್ಕೆ ಸೇರಿಸಿ ದಿನಕ್ಕೆ ಎರಡು ಮೂರು ಸಲ ಕುಡಿದರೆ ಭೇದಿ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿಕೊಳ್ಳಬಹುದು. 
 
  • 👉 ಪ್ರತೀ ದಿನ ಒಂದೆರಡು ಏಲಕ್ಕಿ ಕಾಳು ಜಗಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಜೀರ್ಣಶಕ್ತಿ ವೃದ್ಧಿಸುತ್ತದೆ ಮತ್ತು  ಕೂದಲಿನ ಸೌಂದರ್ಯ ವೃದ್ಧಿಗೂ ಉಪಕಾರಿಯಾಗುತ್ತದೆ. 
    

 

  • 👉 ಏಲಕ್ಕಿಯನ್ನು ನೀರಿನಲ್ಲಿ ಹಾಕಿ ಆ ನೀರನ್ನು ನಿಯಮಿತವಾಗಿ ಕುಡಿಯುತ್ತಿದ್ದರೆ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ ಮತ್ತು ರಕ್ತವನ್ನು ಶುದ್ಧ ಮಾಡುತ್ತದೆ. * ಕೆಲವು ಸಂಶೋಧನೆಗಳ ಪ್ರಕಾರ ಏಲಕ್ಕಿಯ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕಣಗಳನ್ನು ನಿಯಂತ್ರಣದಲ್ಲಿಡುತ್ತದೆ. 
 
  • 👉 ಏಲಕ್ಕಿ ಬೀಜವನ್ನು ಜೇನು ತುಪ್ಪ ಅಥವಾ ಮೊಸರಿನೊಡನೆ ಸೇರಿಸಿ ಸೇವಿಸುವುದರಿಂದ ಉರಿಮೂತ್ರ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. 
 
  • 👉 ಒಂದೆರಡು ಏಲಕ್ಕಿ ಬೀಜವನ್ನು ಬಾಯಿಕೆ ಹಾಕಿಕೊಂಡು ಚಪ್ಪರಿಸುವುದರಿಂದ ತಕ್ಷಣದ ವಾಕರಿಕೆಯನ್ನು ತಪ್ಪಿಸಬಹುದು. 
 
  • 👉 ಶೀತ ಕೆಮ್ಮು ದಮ್ಮು ಇರುವವರಿಗೂ ಏಲಕ್ಕಿ ಉಪಕಾರಿಯಾಗಿದೆ. ಎದೆ ಉರಿ, ಮಲಬದ್ಧತೆ, ಹುಳಿತೇಗುಗಳು ಏಲಕ್ಕಿ ಸೇವನೆಯಿಂದ ಶಮನವಾಗುತ್ತದೆ. 
    

 

        ಹೀಗೆ ಏಲಕ್ಕಿ ಅತಿ ಸಣ್ಣದಾದರೂ ಅದರ ಉಪಯೋಗ ಬಹಳ ದೊಡ್ಡದು.  ಏಲಕ್ಕಿಯಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಕಬ್ಬಿಣದ ಅಂಶ ಇರುವುದರಿಂದ ಅರೋಗ್ಯ ವೃದ್ಧಿಗೆ ಉತ್ತಮ ಸಹಕಾರಿಯಾಗಿದೆ.  ಏಲಕ್ಕಿಯ ವೈಜ್ಞಾನಿಕ ಹೆಸರು ಎಲೆಟ್ಟೇರಿಯ ಕಾರ್ಡಮೊಮಂ. ಇದು ಝಿಂಜಿಬರೇಸಿ ಕುಟುಂಬಕ್ಕೆ ಸೇರಿದೆ.  

 

ಏಲಕ್ಕಿಯಲ್ಲಿರುವ ಕೆಲವು ಪೌಷ್ಟಿಕಾಂಶಗಳ ಪ್ರಮಾಣ:

 

ವಿಟಮಿನ್ ಸಿ ಪ್ರಮಾಣ – 21 mg  

ಥಿಯಾಮಿನ್ ಪ್ರಮಾಣ  – 0.198 mg

ಸೋಡಿಯಂ ಪ್ರಮಾಣ  – 18 mg

ಪೊಟ್ಯಾಶಿಯಂ ಪ್ರಮಾಣ – 1119 mg

ಮೆಗ್ನೇಷಿಯಂ ಪ್ರಮಾಣ – 229 mg

ಮಾಂಗೆನೀಶ್ ಪ್ರಮಾಣ – 28 mg

ಫಾಸ್ಫೋರಸ್ ಪ್ರಮಾಣ – 178 mg

ಝೀಮ್ಕ್ ಪ್ರಮಾಣ – 7.47 mg

ಕ್ಯಾಲ್ಸಿಯಂ ಪ್ರಮಾಣ – 383 mg

ಕಬ್ಬಿಣ ಅಂಶ ಪ್ರಮಾಣ – 13.97 mg

ತಾಮ್ರದ ಪ್ರಮಾಣ –  0.383 mg

 

    ಹೀಗೆ ಏಲಕ್ಕಿಯಲ್ಲಿರುವ ಅತಿಯಾದ ಪೌಷ್ಟಿಕಾಂಶದಿಂದ ನಮ್ಮ ಆರೋಗ್ಯವೃದ್ಧಿಗೆ ಸಹಕಾರಿಯಾಗಿದ್ದು ಬಹಳ ಶ್ರೇಷ್ಠ ಸ್ಥಾನವನ್ನು ಆಯುರ್ವೇದದಲ್ಲೂ ಪಡೆದಿದೆ. 

 

    ಆದರೆ ಕೊನೆಯದಾಗಿ ಹೇಳಲೇಬೇಕಾದ ಮುಖ್ಯವಾದ ವಿಚಾರವೆಂದರೆ ಅತಿಯಾದರೆ ಅಮೃತವೂ ವಿಷ ಎನ್ನುವ ಮಾತು. ಹೌದು ಸ್ನೇಹಿತರೇ ಅತಿಯಾದರೆ ದೇಹಕ್ಕೆ ಆರೋಗ್ಯಕ್ಕೆ ಯಾವುದೂ ಒಳ್ಳೆಯದಲ್ಲ. ಏಲಕ್ಕಿಯಲ್ಲಿ ಎಷ್ಟೇ ಔಷಧೀಯ ಗುಣ ಇದ್ದರೂ ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಎಷ್ಟು ಉಪಕಾರವಿದೆಯೋ ಅಷ್ಟೇ ಅಡ್ಡ ಪರಿಣಾಮಗಳೂ ಇದೆ. ಮುಖ್ಯ ವಾಗಿ ಏಲಕ್ಕಿಯನ್ನು ಅತಿಯಾಗಿ ಸೇವಿಸಿದರೆ ಚರ್ಮದ ಅಲರ್ಜಿ, ಪಿತ್ತಕೋಶದ ತೊಂದರೆ ಹೀಗೆ ಕೆಲವು ತೊಂದರೆಗಳು ಉಂಟಾಗುತ್ತದೆ.  ಅದೂ ಅಲ್ಲದೆ ಕೆಲವೊಂದು ಗಂಭೀರ ಕಾಯಿಲೆಯುಳ್ಳವರೂ ಸೇವಿಸುವುದು ಒಳ್ಳೆಯದಲ್ಲ. ಹಾಗಾಗಿ ಇಂಥವರು ಖಂಡಿತವಾಗಿ ಏಲಕ್ಕಿಯನ್ನು ಸೇವಿಸುವ ಮೊದಲು ತಮ್ಮ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆಯನ್ನು ಪಡೆಯಬೇಕು. 

 

ಮಿತಿಯಲ್ಲಿದ್ದರೆ 

ಎಲ್ಲವೂ ಆರೋಗ್ಯಕರ ..!!

ಅತಿಯಾದರೆ 

ಜೀವನವೇ ದುಸ್ಥರ ..!!

 

(ಲೇಖನ : ವೆಬ್ ಮತ್ತು ಕೆಲವು ಪುಸ್ತಕದ ಆಧಾರದಲ್ಲಿ ಸಂಪಾದಿಸಲಾಗಿದೆ) 

5 thoughts on “ದಿನಾ ನಾವು ಬಳಸುವ ಏಲಕ್ಕಿ ನಮ್ಮ ಆರೋಗ್ಯಕ್ಕೆ ಎಷ್ಟು ಉಪಕಾರಿ ಎಂದು ನೀವು ಬಲ್ಲಿರಾ?”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ