ಶ್ರೀ ಕ್ಷೇತ್ರ ಕೆಯ್ಯೂರಿನಲ್ಲಿ ನಾಳೆ ಶ್ರೀ ರಾಮೋತ್ಸವ

ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮತ್ತು ಮಂದಿರ ಉದ್ಘಾಟನೆಯ ಪ್ರಯುಕ್ತ ಇಡೀ ದೇಶವೇ ನಾಳೆ ಸಂಭ್ರಮಾಚರಣೆ ಮಾಡಲಿದೆ. ವಿವಿಧ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ, ಜಾತಿ ಪಂಥ ಪಕ್ಷ ಮರೆತು ನಾಳೆ ಇಡೀ ಹಿಂದೂ ಸಮಾಜ ಒಟ್ಟು ನಿಂತು ರಾಮೋತ್ಸವವನ್ನು ಆಚರಿಸಲಿದೆ. ಎಲ್ಲಾ ದೇವಸ್ಥಾನಗಳಲ್ಲಿ ಈ ಪ್ರಯುಕ್ತ ವಿಶೇಷ ಧಾರ್ಮಿಕ ಸಾಂಸ್ಕೃತಿಕ ವೈದಿಕ ಕಾರ್ಯಕ್ರಮಗಳು ನಡೆಯಲಿಕ್ಕಿದೆ.

Ramotsava At Keyyuru

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಪ್ರಸಿದ್ಧ ಕ್ಷೇತ್ರ ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೋಮವಾರ ಶ್ರೀ ರಾಮೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ವೈದಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಕ್ಕಿದೆ. ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಪ್ರಾರ್ಥನೆಯ ನಂತರ ಶ್ರೀ ರಾಮ ತಾರಕ ಹೋಮ ನಡೆಯಲಿದೆ. ಬೆಳಗ್ಗೆ 10.30 ರಿಂದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ ಬೆಟ್ಟoಪಾಡಿ ಇವರಿಂದ ಪ್ರಸಂಗ “ಶ್ರೀರಾಮ ನಿರ್ಯಾಣ” ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿಕ್ಕಿದ್ದು. ದೇವಸ್ಥಾನದ ಪ್ರಾಂಗಣದಲ್ಲಿ ಅಳವಡಿಸಲಾದ ಪರದೆಯಲ್ಲಿ ಅಯೋಧ್ಯೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಮಹಾಪೂಜೆಯ ನಂತರ ಶ್ರೀರಾಮನಿಗೆ ವಿಶೇಷ ಪೂಜೆ ನಡೆಯಲಿದ್ದು ಪ್ರಸಾದ ವಿತರಣೆಯ ನಂತರ ಬಂದಿರುವ ಭಕ್ತಾದಿಗಳಿಗೆಲ್ಲಾ ಅನ್ನಸಂತರ್ಪಣೆ ಇರಲಿದೆ.

ಸಂಜೆ 5 ಗಂಟೆಯ ನಂತರ ಭಜನಾ ಸಂಕೀರ್ತನೆ ನಡೆಯಲಿದೆ. ಭಕ್ತಾದಿಗಳು ತಮ್ಮ ತಮ್ಮ ಮನೆಯಿಂದ ಹಣತೆಗಳನ್ನು ತಂದು ರಾಮ ಮಂದಿರ ಉದ್ಘಾಟನೆಯ ಪ್ರಯುಕ್ತ 6 ಗಂಟೆಗೆ ದೀಪವನ್ನು ಹೊತ್ತಿಸಿ ದೇವಸ್ಥಾನ ಸಂಪೂರ್ಣ ದೀಪಾಲಂಕೃತಗೊಳಿಸುವ ಮೂಲಕ ದೇವಸ್ಥಾನದಲ್ಲಿ ದೀಪೋತ್ಸವ ಆಚರಿಸಲಿದ್ದಾರೆ. ಊರಿನ ಸಮಸ್ತ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.

Leave a Comment