ಇತ್ತೀಚಿಗೆ ದಿನಕ್ಕೊಂದು ಸಿನಿಮಾಗಳು ಸಿದ್ಧವಾಗಿ ಸಾಲು ಸಾಲಾಗಿ ಬಿಡುಗಡೆಗೆ ಟೊಂಕ ಕಟ್ಟಿ ತಾ ಮುಂದು ನಾ ಮುಂದು ಎಂದು ಪೈಪೋಟಿಯಲ್ಲಿ ನಿಂತಿರುವುದು ಸಿನಿಮಾ ಕ್ಷೇತ್ರಕ್ಕೆ ಒಂದು ರೀತಿಯಲ್ಲಿ ಖುಷಿಯ ವಿಚಾರವೇ. ಜೊತೆಗೆ ಕಷ್ಟವೂ ಹೌದು. ಯಾಕೆಂದರೆ ಭಾಷಾವಾರು ಕ್ಷೇತ್ರಕ್ಕೆ ಹೋಲಿಸಿದರೆ ಆಯಾಯ ಅಂಗಳದಲ್ಲಿ ಸೀಮಿತ ಪ್ರೇಕ್ಷಕರನ್ನು ಒಳಗೊಂಡು ಅವರುಗಳ ಮದ್ಯೆಯೇ ಸಿನಿಮಾ ಮಾರ್ಕೆಟಿಂಗ್ ಮಾಡಿ ಬಿಡುಗಡೆಗೊಳ್ಳುವಂತಹ ಎಲ್ಲಾ ಸಿನಿಮಾಗಳ ನಿರ್ದೇಶಕರು, ವಿತರಕರು ತಮ್ಮ ಬಂಡವಾಳದ ಜೊತೆ ಲಾಭವನ್ನು ಪಡೆಯುವ ಪ್ರಯತ್ನವನ್ನು ಮಾಡಬೇಕಾದಂತಹ ಪರಿಸ್ಥಿತಿ ಇದೆ.
ಇತ್ತೀಚಿನ ದಿನಗಳಲ್ಲಿ ನಿರ್ಮಾಪಕರಿಗೆ ಸಿನಿಮಾವನ್ನು ನಿರ್ಮಾಣ ಮಾಡುವುದು ಮುಂಚಿನಂತೆ ಕಷ್ಟವೇನೂ ಇಲ್ಲ. ಯಾಕೆಂದರೆ, ಇಂದಿನ ಪ್ರೇಕ್ಷಕರು ಬಯಸೋದು ಕಥೆಯನ್ನು ಮತ್ತು ಕಥೆಯ ಪಾತ್ರವನ್ನು ಹೊರತು ಪಾತ್ರದಾರಿಯನ್ನಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಗಳು ಇತ್ತೀಚಿನ ದಿನಮಾನಗಳಲ್ಲಿ ಬಿಡುಗಡೆಗೊಂಡು ಗೆಲ್ಲುತ್ತಿರುವಂತಹ ಸಿನಿಮಾಗಳು. ಸಿನಿಮಾಕ್ಕೆ ಯಾರು ಹೀರೊ ಯಾರು ಹೀರೋಯಿನ್ ಎಂದು ಕೇಳಿ ಬಂಡವಾಳ ಹೂಡುವ ಕಾಲ ಈಗ ಹೋಯಿತು. ಹೊಸ ಮುಖಗಳ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿರುವುದು ಇದಕ್ಕೆ ಹಿಡಿದ ಕನ್ನಡಿ. ಕಥೆ ಇಷ್ಟ ಆಯಿತೆಂದರೆ ಪ್ರೇಕ್ಷಕ ಪ್ರಭು ನಿರ್ಮಾಪಕರನ್ನು ನಿರ್ದೇಶಕರನ್ನು ಅಟ್ಟದಲ್ಲಿ ಮೆರೆಸಿಬಿಡುತ್ತಾನೆ. ಅದಕ್ಕೆ ನೇರ ಉದಾಹರಣೆ ಮಾದೇವ, ದಸ್ಕತ್, ಸ್ಕೂಲ್ ಲೀಡರ್, ಧರ್ಮಚಾವಡಿ, ವಾಮನ, ಮೀರಾ ಮುಂತಾದವುಗಳು.

ಇರಲಿ, ನಾವು ಮಾತನಾಡಲು ಬಂದಿರುವುದು ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವಂತಹ ಹೊಸ ತುಳು ಚಲನಚಿತ್ರ ಧರ್ಮಚಾವಡಿ ಬಗ್ಗೆ. ಮೇಲೆ ಹೇಳಿರುವ ವಿಷಯಕ್ಕೆ ಈ ಸಿನಿಮಾ ಹೊರತಾಗಿಲ್ಲ. ಹೊಸ ತಂಡ, ಹೊಸ ನಿರ್ಮಾಪಕರು ಮತ್ತು ವಿಶೇಶವಾಗಿ ಹೊಸ ಕಲಾವಿದರನ್ನು ಹಾಕಿಕೊಂಡು ಪ್ರೇಕ್ಷಕರ ಮುಂದೆ ಬಂದ ತುಳು ಚಿತ್ರ ಧರ್ಮಚಾವಡಿ. ಕಾಂತಾರ ಬಂದ ನಂತರ ದೈವಗಳ ಕುರಿತಾದ ಸಿನಿಮಾಕ್ಕೆ ಹೆಚ್ಚು ಬೇಡಿಕೆ ಮತ್ತು ನಿರ್ಮಾಣದ ಹುಮ್ಮಸ್ಸು ಬಂದಿರುವುದಂತು ನಿಜ. ಅದರೆ ಕಾಂತಾರದಂತಹ ಸಿನಿಮಾಗಳಿಂದ ತುಳುನಾಡಿನ ನೆಲದ ಆಚರಣೆ ಸಂಸ್ಕೃತಿ ಕಟ್ಟುಕಟ್ಟಲೆ ಜಗದಗಲ ಪಸರಿಸಿ ತುಳುವರ ಎದೆ ಉಬ್ಬಿದ್ದು ಎಷ್ಟು ಸತ್ಯವೋ, ತುಳುವರ ನಂಬಿಕೆಗೆ ಘಾಸಿಯಾಗುವಂತಹ ಪ್ರಮೇಯಗಳು ನಡೆದು ನಮ್ಮದೇ ತಲೆ ತಗ್ಗುವಂತೆ ಆಗಿದ್ದೂ ಅಷ್ಟೇ ಸತ್ಯ. ಆದರೆ ಧರ್ಮಚಾವಡಿ ಇದಕ್ಕಿಂತ ಸಾವಿರಪಟ್ಟು ವಿಭಿನ್ನ ಚಿತ್ರ. ಇದಕ್ಕೆ ಕಾರಣ ನಿರ್ದೇಶಕರ ನಿರ್ದೇಶನಾ ಕೌಶಲ್ಯತೆ ಮತ್ತು ಕಥೆ ಹೆಣೆದಿರುವ ರೀತಿ. ಬಹಳ ಚತುರತೆಯಿಂದ ಮತ್ತು ಜವಾಬ್ದಾರಿಯಿಂದ ನಿರ್ದೇಶಕರು ಕಥೆಯನ್ನು ಕೊಂಡು ಹೋಗಿರುವುದು ಅವರ ನಿರ್ದೇಶನಾ ಶ್ರೀಮಂತಿಕೆಗೆ ಹಿಡಿದ ಕನ್ನಡಿ. .
ಧರ್ಮಚಾವಡಿ ಸಿನಿಮಾ ದೈವದ ಎಳೆಯನ್ನು ಇಟ್ಟುಕೊಂಡು ಹೆಣೆದಿರುವ ಕಥೆಯಾದರೂ, ಎಲ್ಲಿಯೂ ದೈವದ ಮುಖವನ್ನು ತೋರಿಸದೆ, ದೈವವನ್ನು ವೈಭವೀಕರಿಸದೆ, ದೈವದ ಶಕ್ತಿಯ ಇರುವಿಕೆಯನ್ನು ಮಾತ್ರ ಮನ ಮುಟ್ಟುವಂತೆ, ಭಕ್ತಿ ಹೆಚ್ಚುವಂತೆ ತೋರಿಸಿಕೊಟ್ಟಿದ್ದಾರೆ ನಿರ್ದೇಶಕರು. ನಮ್ಮ ಜೀವನದಲ್ಲಿ ಕೇಡು ಬಯಸಿದವರಿಗೆ ಶಿಕ್ಷಿಸುವ ಮತ್ತು ಬೇಡಿ ಬಂದವರಿಗೆ ಮಾಯದಲ್ಲಿ ಅಭಯ ನೀಡುವ ದೈವದ ಶಕ್ತಿಯ ಬಗ್ಗೆ ನಮ್ಮಲ್ಲಿರುವ ಕಲ್ಪನೆಯೇ ದೈವವನ್ನು ಇನ್ನಷ್ಟು ಆಳವಾಗಿ ಗಾಢವಾಗಿ ಭಕ್ತಿ ಪರವಶವಾಗಿ ನಂಬುವಂತೆ ಮಾಡಿರುವುದು. ಹಾಗಾಗಿ ದೈವ ಶಕ್ತಿ ಎಂಬುದು ಒಂದು ವೇಷಕ್ಕೆ ಸೀಮಿತ ಅಲ್ಲ. ತುಳುನಾಡಿನ ಒಂದೊಂದು ಊರಿನಲ್ಲಿ ಒಂದೊಂದು ರೀತಿಯಲ್ಲಿ ದೈವದ ಶಕ್ತಿಗೆ, ಅವರವರ ಕಾರ್ಣಿಕಕ್ಕೆ ಹೆಸರನ್ನು ಕಲ್ಪಿಸಿಕೊಂಡು ನರ್ತನ ಸೇವೆ ಮೂಲಕ ದೈವವನ್ನು ನಂಬುತ್ತೇವೆ. ಇಲ್ಲಿ ದೈವ ಶಕ್ತಿ ಮತ್ತು ದೈವದ ಮೇಲಿರುವ ನಂಬಿಕೆಯೇ ಮೇಲು. ಸಿನಿಮಾದಲ್ಲಿ ಅದನ್ನು ಉಳಿಸಿಕೊಂಡು ಬಂದಿರುವ ನಿರ್ದೇಶಕರು ನಿಜವಾಗಿ ಪ್ರೇಕ್ಷಕರ, ದೈವ ಭಕ್ತರ ಮನ ಗೆದ್ದಿದ್ದಾರೆ.
ಸೀಮಿತವಾದ ಮಾರುಕಟ್ಟೆಯಲ್ಲಿ ಒಂದಷ್ಟು ಬಂಡವಾಳ ಹಾಕಿ ಜೊತೆಗೆ ಹೊಸ ಕಲಾವಿದರನ್ನು ಸೇರಿಸಿಕೊಂಡು ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಇಲ್ಲಿ ಗೆಲ್ಲಬೇಕಾದರೆ ನಿರ್ದೇಶಕರಿಗೆ ಅವರ ಕಥೆ ಮೇಲೆ ನಂಬಿಕೆ ಇರಬೇಕು. ಧರ್ಮಚಾವಡಿ ಸಿನಿಮಾ ಕಥೆಯ ಕರ್ತೃ ಮತ್ತು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಅವರಿಗೆ ಈ ನಂಬಿಕೆ ಇತ್ತು ಎಂಬುದನ್ನು ಸಿನಿಮಾ ಬಲವಾಗಿ ತೋರಿಸಿಕೊಟ್ಟಿದೆ. ಎರಡು ವಾರದಲ್ಲಿ ಸಾಕಷ್ಟು ಶೋಗಳು ಹೌಸ್ ಫುಲ್ ಹೋಗಿ ಮುನ್ನಡೆಯುತ್ತಿರುವುದು ಇದಕ್ಕೆ ಸಾಕ್ಷಿ. ಧರ್ಮಚಾವಡಿ ಸಿನಿಮಾ ಮಾಡಿ ನಿರ್ದೇಶಕರು ಈಗಾಗಲೇ ಗೆದ್ದಾಯಿತು. ಇನ್ನು ನಿರ್ಮಾಪಕರು ಗೆಲ್ಲುವುದರಲ್ಲಿ ಸಂಶಯವಿಲ್ಲ.
ಚಿತ್ರದಲ್ಲಿ ಹೃನ್ಮನ ಮುದಗೊಳ್ಳುವ ದೃಶ್ಯಗಳನ್ನು ಸೆರೆ ಹಿಡಿದ ರೀತಿ, ಕಥೆ ಗಂಭೀರತೆಯನ್ನು ಪಡೆಯುವಾಗ ಮಧ್ಯದಲ್ಲಿ ಬರುವ ಮನಸ್ಸಿಗೆ ಐಸ್ ವಾಟರ್ ಎರಚಿದಂತೆ ಪ್ರೆಷಪ್ ಮಾಡುವ ಕಾಮಿಡಿ ಪಂಚ್ ಗಳು, ಯಾವತ್ತಿಗೂ ನೆನಪಿನಲ್ಲಿ ಉಳಿಯುವಂತಹ ಸುಂದರ ಪದಗಳ ಗುಚ್ಛದಂತಹ ಮಲಯಾಳಿ ಮಣ್ಣ್ ದ ತುಳುವೆದಿ ಹಾಡು, ವಿಶೇಷವಾಗಿ ಚಿತ್ರದುದ್ದಕ್ಕೂ ಎಲ್ಲೂ ನಿಮ್ಮನ್ನು ನೀವು ಕುಳಿತ ಸೀಟಿನಿಂದ ಮಿಸುಕಾಡದಂತೆ ಹಿಡಿದಿಟ್ಟುಕೊಳ್ಳುವ ಬಿಜಿಎಂ ಸ್ಕೋರ್, ಪ್ರೇಕ್ಷಕರ ಮನಸಿನಲ್ಲಿ ಅಚ್ಚಳಿಯದೇ ಉಳಿಯುವಂತಹ ಪ್ರತಿಯೊಬ್ಬರ ನಟನೆ, ಪ್ರತಿಯೊಂದು ಫ್ರೇಮ್ ನಲ್ಲೂ ತನ್ನದೇ ಆದ ದೃಶ್ಯ ಕಾವ್ಯ ಮೂಡಿ ಬಂದಿರುವುದು ತುಳು ಚಿತ್ರರಂಗವನ್ನೇ ಒಂದು ಹಂತ ಉನ್ನತೀಕರಿಸಿದೆ ಅಂತಾನೇ ಹೇಳಬಹುದು.

ಚಿತ್ರ ಒಂದು ಹಂತದಲ್ಲಿ ಹುಬ್ಬೇರುವಂತೆ ಮಾಡುತ್ತಿರುವಾಗಲೇ ಶಾಂತವಾಗಿದ್ದ ಒಂದು ಪಾತ್ರ ಕೊನೆಯಲ್ಲಿ ಅಬ್ಬರಿಸಿ ನಾಗವಲ್ಲಿಯಾಗಿ ಇಡೀ ಧರ್ಮಚಾವಡಿಯ ನ್ಯಾಯವನ್ನು ತನ್ನ ಉಗ್ರ ರೂಪದಲ್ಲಿ ಉಳಿಸುವ ಮತ್ತು ಅನ್ಯಾಯವನ್ನು ಸರ್ವನಾಶ ಮಾಡುವ ದೃಶ್ಯ ಚಿತ್ರ ರಸಿಕರನ್ನು ‘ಅದ್ಭುತ’ ಎಂದು ಉದ್ಗರಿಸುವಂತೆ ಮಾಡಿದ್ದು, ತುಳು ಚಿತ್ರರಂಗದಲ್ಲೇ ಅಚ್ಚಳಿಯದೆ ಉಳಿಯುವಂತೆ ಮಾಡಿದೆ. ಅನ್ಯಾಯ ಯಾರೇ ಮಾಡಲಿ, ಅವರಿಗೆ ತಕ್ಕುದಾದ ಶಿಕ್ಷೆ ವಿಧಿಸುವ ಮತ್ತು ತನ್ನ ಚಾವಡಿಯಲ್ಲಿ ನ್ಯಾಯ ಅನ್ಯಾಯದ ತೀರ್ಮಾನ ಮಾಡುವಂತಹ ಶಕ್ತಿ ಆ ದೈವ ಎಂಬುದೇ ಈ ಸಿನಿಮಾದ ಸಾರ..
ಸಿನಿಮಾದ ಮೊದಲಾರ್ದದ ತನಕ ಪ್ರೇಕ್ಷಕರನ್ನು ಸೀಟಿಗೆ ಒರಗಿ ಸಿನಿಮಾದೊಳಗೆ ಮಗ್ನರಾಗಿ ಕುಳಿತುಕೊಳ್ಳುವಂತೆ ಮಾಡಿದರೆ, ನಂತರ ಕ್ಲೈಮಾಕ್ಸ್ ತನಕ ಜನರು ತಮಗರಿವಿಲ್ಲದಂತೆ ಸೀಟಿನ ತುದಿಗೆ ಬಂದು ಕೂರುವಂತೆ ಮಾಡುತ್ತದೆ. ಅದಕ್ಕೆ ತಕ್ಕಂತೆ ತುಳುನಾಡಿನ ಪ್ರಸಿದ್ಧ ಯಕ್ಷಗಾನ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ ಅವರ ಕಂಚಿನ ಕಂಠದಲ್ಲಿ ಮೂಡಿ ಬಂದ ಗೆಂಡದ ಬರ್ಸೊಗು ಕರ್ಬದ ಕೊಡೆ ಹಾಡು ಎಂಥವರ ಮೈ ಮನ ರೋಮಾಂಚನಗೊಳ್ಳುವಂತೆ ಮಾಡುತ್ತದೆ. ಕೊನೆಯಲ್ಲಿ ಬರುವ ಒಂದು ಪಾತ್ರವಂತೂ ಇಡೀ ಚಿತ್ರಕ್ಕೆ ಕಿರೀಟವಿಟ್ಟಂತೆ ಭಾಸವಾಗಿದ್ದು ನಿಜ, ಮತ್ತು ಈ ಪಾತ್ರವೇ ಚಿತ್ರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಕಾರಣವಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗದು. ಕೇವಲ ಪದಗಳಲ್ಲಿ ವಿವರಿಸಿದರೆ ರುಚಿ ಇರೋದಿಲ್ಲ. ಕುಟುಂಬ ಸಮೇತ ಚಿತ್ರ ಮಂದಿರಕ್ಕೆ ಹೋಗಿ ನೀವು ಸಹ ವೀಕ್ಷಿಸಿ, ಆನಂದಿಸಿ. ಏನೇ ಆಗಲಿ ತುಳು ಚಿತ್ರರಂಗದಲ್ಲೇ ವಿನೂತನ ಪ್ರಯೋಗದ ಮೂಲಕ ಚಿತ್ರ ರಸಿಕರನ್ನು ಗೆಲ್ಲುವಲ್ಲಿ ಯಶಸ್ಸು ಕಾಣುತ್ತಿರುವ ಧರ್ಮಚಾವಡಿ ಸಿನಿಮಾ ಶತ ದಿನೋತ್ಸವ ದಾಟಿ ಇತಿಹಾಸ ನಿರ್ಮಿಸಲಿ ಎಂಬುದೇ ನಮ್ಮ ಹಾರೈಕೆ.
ಲೇಖನ: ಪ್ರಮೀತ್ ರಾಜ್ ಕಟ್ಟತ್ತಾರು

Read More
- ಕೊನೆಯಲ್ಲಿ ಅಬ್ಬರಿಸಿದ ಧರ್ಮಚಾವಡಿಯ ”ನಾಗವಲ್ಲಿ”. ಚಿತ್ರಮಂದಿರದತ್ತ ಓಡೋಡಿ ಬರುತ್ತಿರುವ ಪ್ರೇಕ್ಷಕರು. ಏನಾಯಿತು?
- ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿದ ‘ಧರ್ಮಚಾವಡಿ’ ತುಳು ಸಿನಿಮಾ ಬಿಡುಗಡೆಗೆ ಕ್ಷಣಗಣನೆ
- FemiPro Review: The Ultimate Support for Women’s Urinary and Vaginal Health
- Business Development Executive Job at Puttur
- Customer Support Associate Job
- Sales Executive Job