”ನೋವಿನಲ್ಲೂ ಅರಳುವ ಕಲೆ”
ಬದುಕು ಒಂದು ಕಲೆ ಎನ್ನುತ್ತೇವೆ.ಬದುಕುವ ಕಲೆ ಗೊತ್ತಿದ್ದರೆ, ಆತ್ಮ ವಿಶ್ವಾಸವಿದ್ದರೆ ಮೂಡುವ ಕಲೆಯೇ ಬದುಕಿಗೆ ಆಸರೆಯಾಗುತ್ತದೆ.
ನೊಂದವರ ಪಾಲಿಗೆ ಆಸರೆ ತಂಡದ ಮೂಲಕ ಯುವ ಕಲಾವಿದರೊಬ್ಬರ ವಿಷಯ ತಿಳಿದು ಮನಸ್ಸಿಗೆ ತುಸು ಸಂಕಟವಾದರೂ ಬದುಕಿಗೆ ಸ್ಫೂರ್ತಿಯ ಸೆಲೆಯಾಯಿತು
ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಈಶ ನಗರದ ಹಿರಿಜೀವಗಳು ಕಳೆದ ಎಂಟು ವರ್ಷಗಳಿಂದ ಕಡು ಬಡತನದೊಂದಿಗೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ನಾಳೆಯ ಬೆಳಕಿಗಾಗಿ ಹಾತೊರೆಯುತ್ತಿದ್ದಾರೆ. ಇದರ ನಡುವೆಯೂ ಇವರ ಕುಟುಂಬದಲ್ಲಿ ಕಲಾಪ್ರತಿಭೆಯೊಂದು ಬೆಳಗುತ್ತಿರುವುದು ನಾವು ಗಮನಿಸಬೇಕಾದ ವಿಷಯ.
ಬಡಗ ಬೆಳ್ಳೂರು ಈಶನಗರದ, ಲಕ್ಷ್ಮಣ-ಲೀಲಾ ದಂಪತಿ ಮಗ ನಿಶಾಂತ್ (ಜಿತೇಶ್) ಬಾಲ್ಯದಿಂದಲೂ ಪ್ರತಿಭಾವಂತ ಹುಡುಗ. ತನ್ನ ಪ್ರಾಥಮಿಕ ಶಿಕ್ಷಣವನ್ನು ಬಡಗ ಬೆಳ್ಳೂರು, ಪ್ರೌಢಶಾಲಾ ಶಿಕ್ಷಣವನ್ನು ಪೊಳಲಿಯಲ್ಲಿ ಮುಗಿಸಿದ ನಿಶಾಂತ್ ಈಶನಗರ, ಬೆಂಜನಪದವು ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ(ಕಾಮರ್ಸ್) ಉತ್ತೀರ್ಣರಾಗಿರುವರು.
ಕೇವಲ ಪೆನ್ಷಿಲ್ ಬಳಸಿ ರಚಿಸಿರುವ ನಿಶಾಂತ್(ಜಿತೇಶ್)ಈಶನಗರ, ಬಡಗ ಬೆಳ್ಳೂರು ಅವರ ಮಹಾಗಣಪತಿ, ಬುದ್ಧ, ಗಾಂಧೀಜಿ, ಮೋದಿ ಮೊದಲಾದ ಚಿತ್ರಗಳಲ್ಲಿ ಜೀವಕಳೆ ತುಂಬಿದಂತಿದ್ದು ಎಂಥವರನ್ನೂ ಮೋಡಿಮಾಡಿ ಮಾಡದೆ ಬಿಡದು.
“ನನ್ನ ಕಲಾ ಹವ್ಯಾಸದಿಂದ ನೋವನ್ನು ಮರೆತು ತಂದೆ ತಾಯಿಯವರ ಅನಾರೋಗ್ಯ, ಮನೆಯ ಜೀವನ ನಿರ್ವಹಣೆಗಾಗಿ ತಂಗಿ ಪ್ರೀತಿ, ತಮ್ಮ ಭವಿಷ್ ಇವರ ಶಿಕ್ಷಣಕ್ಕಾಗಿ ಇಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದೇನೆ. ಅದೂ ಈ ಕೋರೋಣ ಸಂಕಷ್ಟ ಕಾಲದಲ್ಲಿ ಬಾಯಿಗೆ ಬಾರದ ತುತ್ತಾಗಿದೆ. ಮಹನೀಯರೇ ನಿಮ್ಮ ಪರಿಸರದಲ್ಲಿರುವ ಮನೆ, ದೇವಾಲಯ, ಮಂದಿರ ಮುಂತಾದುವುಗಳಲ್ಲಿ ಅವಕಾಶ ನೀಡುವಿರಾದರೆ ನನ್ನ ಬದುಕಿಗೊಂದು ಆಸರೆಯಾದೀತು” ಎಂದು ವಿನಂತಿಸಿದಾಗ ಕಲಾವಿದನ ಬದುಕಿನ ನೋವಿನ ಚಿತ್ರ ಕಣ್ಣೆದುರು ಮೂಡಿ ಬಾರದೆ ಇರದು.
ಇಲ್ಲಿ ನಾವು ನಿಜಾವಾಗಿ ಗಮನಿಸಬೇಕಾದ ವಿಚಾರ ಅಂದರೆ ಈ ಕಲಾ ಶ್ರೀಮಂತಿಕೆಯ ಬಡ ಕಲಾವಿದನು ತನಗೆ ಇಷ್ಟು ದುಡ್ಡು ಕೊಟ್ಟು ಸಹಾಯ ಮಾಡಿ ಎಂದು ಕೇಳದೆ ತನ್ನ ಕಲೆಯನ್ನು ಬಳಸಿಕೊಂಡು ತಾನು ತನ್ನ ಕುಟುಂಬವನ್ನು ಸಾಕಬೇಕು ಮತ್ತು ತನ್ನ ಜೀವನದ ಕೈ ಹಿಡಿಯಬೇಕು ಎಂಬ ಸ್ವಾಭಿಮಾನದ ಮಾತು. ನಿಜವಾಗಿ ಈ ಕಲಾವಿದ ಗೆಲ್ಲುತ್ತಾನೆ. ಅದಕ್ಕೆಲ್ಲ ನಮ್ಮ ಸಹಕಾರ ಅವರಿಗೆ ಅತ್ಯಗತ್ಯ. ಇವರು ಮಾಡುವ ವೃತ್ತಿಯಲ್ಲಿಯೂ ಇವರಿಗೆ ಗೆಲುವು ಸಿಕ್ಕರೆ ಇವರ ಕಲೆಯು ಶ್ರೀಮಂತವಾಗುತ್ತದೆ.
ಹೌದು ಇಂಥ ಸೃಜನ ಶೀಲ ಯುವ ಕಲಾವಿದ ನಿಶಾಂತ್(ಜಿತೇಶ್) ಈಶನಗರ ಬಡಗ ಬೆಳ್ಳೂರು ಇವರ ಕಲಾಕುಸುಮ ಬಡತನದ ಬೇಗೆಯಲಿ… ಬಾಡದಿರಲಿ ಎಂದು ಹಾರೈಸಿ ಸಹಾಯದ ಹಸ್ತ ನೀಡೋಣ.
ನಿಶಾಂತ್ (ಜಿತೇಶ್) ಅವರಿಗೆ ಸಹಾಯ ಹಸ್ತ ಚಾಚುವವರು, ಪ್ರೋತ್ಸಾಹಿಸುವವರು ಅವರ ಮೊಬೈಲ್ ಸಂಖ್ಯೆ 9740027064 ಗೆ ಸಂಪರ್ಕಿಸಬಹುದು.
ಬರಹ : ನಾರಾಯಣ ರೈ ಕುಕ್ಕುವಳ್ಳಿ.
Tags – Jithesh, Pencil artist, badagabelluru, mangalore, bantwala, kale, art, lockdown effect.