ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು?

ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು??  

ಹೆಗಳೆತ್ತರಕ್ಕೆ ಬೆಳೆದ ಮಕ್ಕಳು ತನಗಾಸರೆಯಾಗುತ್ತಾರೆ ಎಂಬ ಹೆಬ್ಬಯಕೆಯಲ್ಲಿರುವ ಅದೆಷ್ಟೋ ಹೆತ್ತವರು, ಮಕ್ಕಳ ದುರಾಸೆಗೆ, ಅತಿಯಾಸೆಗೆ ಬಲಿಯಾಗಿ ವೃದ್ಧಾಶ್ರಮ ಸೇರುವ ಅದೆಷ್ಟೋ ಪ್ರಮೇಯಗಳನ್ನು ನಾವು ಕಂಡಿದ್ದೇವೆ. ತಾನು ತನ್ನ ಪ್ರಿಯತಮೆಯೊಂದಿಗೆ ಸುಖವಾಗಿರಬೇಕೆಂಬ ಹುಚ್ಚು ಆಸೆಯಲ್ಲಿ ವಿದೇಶದಲ್ಲಿ ಸೆಟಲ್ ಆಗಿ ಹೆತ್ತವರನ್ನು ಮರೆತು ಬಿಡುವ ನಿಷ್ಕರುಣಿ ಮಕ್ಕಳನ್ನು ನಾವು ನೋಡಿದ್ದೇವೆ. ಹೆತ್ತ ಕರುಳು ತನ್ನ ಮಕ್ಕಳ ಜೀವನಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿರಿಸಿ ಬದುಕು ಸವೆಸಿದಳೆಂಬ ವಿವೇಚನೆಯೂ ಇಲ್ಲದೆ ಅದಾವುದೋ ಕ್ಷಣಿಕ ಸ್ವಾರ್ಥಕ್ಕಾಗಿ ಕುರುಡು ಪ್ರೀತಿಗಾಗಿ ಹೆತ್ತವರ ಧಿಕ್ಕರಿಸಿ ಹೊರಟು ನಿಂತ ಮಕ್ಕಳ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲಿ ಒಬ್ಬಳು ಮಗಳು ತನಗೆ ಜೀವ ಕೊಟ್ಟ ಹೆತ್ತಮ್ಮಳ ಜೀವವನ್ನೇ ಉಳಿಸಿ ಎಲ್ಲಾ ನಮಗೆಲ್ಲರಿಗೂ ಮಾದರಿಯಾಗಿ ನಿಂತಿದ್ದಾಳೆ. ತನ್ನ ಜೀವದ ಹಂಗು ತೊರೆದು ತನ್ನ ತಾಯಿಗೆ ಬಂದೊದಗಿದ ಸಂಕಷ್ಟವನ್ನು ಅರಿತು ತಾಯಿಯನ್ನು ಉಳಿಸುವಲ್ಲಿ ಮಾತ್ರ ಆಲೋಚನೆ ಮಾಡಿ ತನ್ನ ಬಗ್ಗೆ ಒಂದಿಷ್ಟು ಯೋಚನೆ ಮಾಡದೇ ತನ್ನ ಸಮಯ ಪ್ರಜ್ಞೆಯಿಂದ ಕಾರ್ಯ ಪ್ರವೃತ್ತಳಾದ ಹೆಣ್ಣು ಮಗಳು ತನ್ನ ತಾಯಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗುತ್ತಾಳೆ.

Shramya Rai


ಹೌದು ಆಕೆಯ ಹೆಸರು ಶ್ರಮ್ಯ ರೈ(Shramya Rai), ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕೃಷಿಕರಾದ ಸತೀಶ್ ರೈ ಮತ್ತು ಕೆಯ್ಯೂರು ಗ್ರಾಮ ಪಂಚಾಯತ್ ನ ಸದಸ್ಯೆಯಾದ ಮಮತಾ ಎಸ್ ರೈ ದಂಪತಿಗಳ ಪುತ್ರಿ. ಆ ದಿನ ಮಮತಾ ರೈ(Mamatha S Rai) ಯವರು ತಮ್ಮ ಅಡಿಕೆ ತೋಟದಲ್ಲಿ ಪಂಪ್ ನ ಸ್ವಿಚ್ ಆಫ್ ಮಾಡಲೆಂದು ಹೊರಟಿದ್ದರು. ಅಲ್ಲಿ ಜವರಾಯ ಕಾದು ಕುಳಿತಿದ್ದಾನೆಂಬ ಅರಿವು ಇರದೇ ಮಮತಾ ಅವರು ಪಂಪ್ ಶೇಡ್ ನಲ್ಲಿ ಏನೋ ಶಬ್ದ ಬಂತು ಎಂದು ಎರಡೆಜ್ಜೆ ಹಿಂದೆ ಇಡುತ್ತಲೇ ನಾಗರಹಾವೊಂದು ಬುಸುಗುಡುತ್ತ ಕಾಲಿಗೆ ಕಚ್ಚಿಯೇ ಬಿಟ್ಟಿತ್ತು. ಮಮತಾ ಅವರು ಕಾಲನ್ನು ಕೊಡವಿದ ತಕ್ಷಣ ಸ್ವಲ್ಪ ದೂರ ಹೋಗಿ ಬಿದ್ದ ಹಾವು ತನ್ನ ಹೆಡೆ ಎತ್ತುತ್ತ ದೂರ ಹೋಯಿತು. ಆದರೆ ಮಮತಾ ರೈ ಅವರು ಒಂದಿಷ್ಟು ಧೃತಿಗೆಡದೆ ನೇರವಾಗಿ ಮನೆಗೆ ಬಂದು ಮನೆಯವರಿಗೆ ತಿಳಿಸುತ್ತಾರೆ ಮತ್ತು ತಕ್ಷಣ ಪರಿಚಯದವರಿಗೆ ವಿಷಯ ಮುಟ್ಟಿಸುತ್ತಾರೆ. ಆದರೆ ಇದರ ತೀವ್ರತೆಯನ್ನರಿತ ಮಗಳು ಶ್ರಮ್ಯ ರೈ ತನ್ನ ಸಮಯ ಪ್ರಜ್ಞೆಯಿಂದ ಅಮ್ಮನ ಕಾಲಿಗೆ ಹಾವು ಕಚ್ಚಿದ ಜಾಗವನ್ನು ಗುರುತಿಸಿ ಒಂದಿಷ್ಟೂ ಆಲೋಚನೆ ಮಾಡದೆ, ತನ್ನ ಜೀವವನ್ನು ಲೆಕ್ಕಿಸದೆ ಬಾಯಿಂದ ಗಾಯದ ಜಾಗವನ್ನು ಕಚ್ಚಿ ವಿಷ ಸೇರಿಕೊಂಡ ರಕ್ತವನ್ನು ಚೀಪಿ ಹೊರಗೆ ಉಗುಳುತ್ತಾಳೆ. ಸತತ ಮೂರುನಾಲ್ಕು ಬಾರಿ ಈ ರೀತಿ ಮಾಡಿ ಪ್ರಥಮ ಚಿಕಿತ್ಸೆ ನೀಡಿ ಹೆತ್ತಬ್ಬೆಯನ್ನು ಸಾವಿನಂಚಿನಿಂದ ಬದುಕಿಸುವಲ್ಲಿ ಶ್ರಮ್ಯ ಯಶಸ್ವಿಯಾಗುತ್ತಾಳೆ ಮತ್ತು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿಲಾಗಿದ್ದು ಈಗ ಇವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶ್ರಮ್ಯಳಾ ಈ ಸಾಹಸಕ್ಕೆ ಎಲ್ಲೆಡೆಯಿಂದ ಪ್ರಸಂಶೆಯ ಮಹಾ ಪೂರವೇ ಹರಿದು ಬರುತ್ತಿದೆ.  ಶ್ರಮ್ಯ ಅವರ ಸಮಯ ಪ್ರಜ್ಞೆ ಮತ್ತು ಸಾಹಸ ನಿಜವಾಗಿಯೂ ಅಭಿನಂದನಾರ್ಹ. 

 

ಕೇವಲ 7 ನಿಮಿಷದಲ್ಲಿ 20 km ದೂರದ ಆಸ್ಪತ್ರೆ ತಲುಪಿಸಿದ ಆಪತ್ಭಾಂಧವ ಶರತ್ ಕುಮಾರ್ ಮಾಡಾವು. 

ಮಮತಾ ರೈ ಅವರಿಗೆ ಹಾವು ಕಚ್ಚಿದ ತಕ್ಷಣ ಕೆಯ್ಯೂರು ಗ್ರಾಮ ಪಂಚಾಯತ್ ನ ಇನ್ನೋರ್ವ ಸದಸ್ಯರಾದ ಶರತ್ ಕುಮಾರ್ ಮಾಡಾವು ಇವರಿಗೆ ವಿಷಯ ಮುಟ್ಟಿಸಿದಾಗ ತನ್ನೆಲ್ಲಾ ಕಾರ್ಯವನ್ನು ಬದಿಗಿಟ್ಟು ತಕ್ಷಣ ಸ್ಥಳಕ್ಕೆ ಧಾವಿಸುತ್ತಾರೆ. ಶ್ರಮ್ಯ ತನ್ನ ಕರ್ತವ್ಯ ಮುಗಿಸುತ್ತಲೇ ಮಮತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಬೇಕಾಗಿತ್ತು.

Sharath Kumar Madavu
Sharath Kumar Madavu   Pic Credit: Facebook

ಇದನ್ನರಿತು ಸುಮಾರು 20 ಕಿಲೋ ಮೀಟರ್ ದೂರವನ್ನು ಕೇವಲ 6 – 7 ನಿಮಿಷದಲ್ಲಿ ಕ್ರಮಿಸುವಲ್ಲಿ ಯಶಸ್ವಿಯಾದ ಶರತ್ ಕುಮಾರ್ ಮಾಡಾವು(Sharath Kumar Madavu) ಅವರ ಸಾಹಸವನ್ನು ಸಹ ಈ ಸಂಧರ್ಭದಲ್ಲಿ ಖಂಡಿತಾ ಮರೆಯುವ ಹಾಗಿಲ್ಲ. ಆಪತ್ಭಂಧವರಂತೆ ಬಂದು ಮಮತಾ ಅವರ ಜೀವವನ್ನು ಕಾಪಾಡುವಲ್ಲಿ ಇವರ ಪಾತ್ರವು ಸಹ ಅಷ್ಟೇ ಪ್ರಮುಖವಾದದ್ದು. 

 

Click to Join Whatsapp Group

 

ಕಲಿತ ಕಾಲೇಜುಗಳಿಂದ ತನ್ನ ವಿದ್ಯಾರ್ಥಿನಿಗೆ ಪ್ರಶಂಸೆಯ ಮಹಾಪೂರ

ಶ್ರಮ್ಯ ರೈ ವಿವೇಕಾನಂದ ಪದವಿ ಕಾಲೇಜಿನ ವಿಧ್ಯಾರ್ಥಿನಿಯಾಗಿದ್ದು, ಈಕೆಯ ಸಾಹಸಕ್ಕೆ ಕಾಲೇಜಿನ ಪ್ರಾಂಶುಪಾಲರಿಂದ ಹಿಡಿದು ಎಲ್ಲರೂ ಹೆಮ್ಮೆ ವ್ಯಕ್ತ ಪಡಿಸಿದ್ದಾರೆ. ಶ್ರಮ್ಯ ಅವರು ಕಾಲೇಜಿನಲ್ಲಿ ಸ್ಕೌಟ್ ಅಂಡ್ ಗೈಡ್ಸ್ ನ ರೇಂಜರ್ ಆಗಿದ್ದು ದೇಶಾಭಿಮಾನ ಮತ್ತು ಸಾಹಸದ ಬಗ್ಗೆ ಮೈಗೂಡಿಸಿಕೊಂಡಿರುವ ಸಾಹಸಿ ವಿಧ್ಯಾರ್ಥಿಯಾಗಿದ್ದಾಳೆ. ಹೀಗೆ ಅನೇಕ ಊರ ಪರವೂರ ಪರಿಚಯದವರ ಗಣ್ಯರ ಪ್ರಸಂಶೆಯು ಹರಿದು ಬರುತ್ತಿದ್ದು, ತಂದೆ ತಾಯಿ ಗೆ ಹೆಮ್ಮೆಯ ಮಗಳಾಗಿ ನಿಂತಿದ್ದಾಳೆ. 

Sathish Rai and Mamatha rai
                     ಸತೀಶ್ ರೈ ದಂಪತಿಗಳು

 

ಇಂತಹ ಸಮಯ ಪ್ರಜ್ಞೆ ಎಲ್ಲಾ ಮಕ್ಕಳಿಗೂ, ಯುವಕ ಯುವತಿಯರಿಗೂ ಬಂದರೆ ನಮ್ಮ ದೇಶ ವಿಶ್ವಗುರುಯಾಗುವುದರಲ್ಲಿ ಪ್ರಧಾನಿ ಮೋದಿಯವರ ಜೊತೆ ನಾವು ಸಹ ಕೈಜೋಡಿಸಿದಂತಾಗುತ್ತದೆ ಎಂದರೆ ಅತಿಶಯೋಕ್ತಿಯೇನಾಗಲ್ಲ. ಮಗಳ ಸಾಹಸವನ್ನು ಮೆಚ್ಚಿ ಹಲವು ಪತ್ರಿಕೆಗಳು, ಚಾನಲ್ ಗಳು ಮನೆಯತ್ತ ಧಾವಿಸಿ ಇಂಟರ್ವ್ಯೂ ಮಾಡುತ್ತಿರಬೇಕಾದರೆ ಇತ್ತ ಕೆಲಸದಲ್ಲಿ ನಿರತರಾಗಿದ್ದ ಶ್ರಮ್ಯ ಅವರ ತಂದೆ ಸತೀಶ್ ರೈ ಯವರಲ್ಲಿ ”ಮಗಳ ಜೊತೆ ಟಿವಿಯಲ್ಲಿ ಬರುವುದಕ್ಕೆ ನಿಮಗೆ ಆಸೆ ಇಲ್ವಾ?” ಎಂದು ಕೇಳಿದಾಗ ”ತನ್ನ ಮಗಳಿಗೆ  ಸಿಗುತ್ತಿರುವ ಈ ಪ್ರಶಂಶೆ ಸನ್ಮಾನಗಳು ನನಗೆ ಸಿಕ್ಕಂತೆ. ತಂದೆಯಾಗಿ ನನಗೆ ಇದಕ್ಕಿಂತ ಮಿಗಿಲಾಗಿ ಇನ್ನೇನು ಬೇಕು” ಎಂದು ಹೇಳಿದಾಗ, ಯಾರ್ಯಾರೋ ಮಾಡುವ ಒಂದು ಸಣ್ಣ ಕೆಲಸವನ್ನು ತಾನೇ ಮಾಡಿದ್ದೂ ಎಂದು ಹೇಳಿ ಎಲ್ಲಾ ಫೋಟೋಗಳಿಗೆ ಎದೆಯೊಡ್ಡಿ ಫೋಸು ಕೊಡುವವರ ಮಧ್ಯೆ ಇವರು ನಿಜಾವಾಗಿಯೂ ಭಿನ್ನವಾಗಿ ನಿಲ್ಲುತ್ತಾರೆ. ಹೆಮ್ಮೆ ಅನಿಸಿತು.  ಶೌರ್ಯವಂತ ಮಗಳ ಹೆತ್ತ ಈ ತಂದೆ ತಾಯಿಗೆ ಮೊದಲು ನಾವು ಸೆಲ್ಯೂಟ್ ಹೊಡೀಲೇಬೇಕು.   .     

 

ಪುತ್ತೂರು ಶಾಸಕರಾದ ಸಂಜೀವ ಮಠ೦ದೂರು ಸಂತ್ರಸ್ತೆಯ ಮನೆಗೆ ಭೇಟಿ  

ವಿಷಯ ತಿಳಿದು ಪುತ್ತೂರು ಶಾಸಕರಾದ ಸಂಜೀವ ಮಠoದೂರು, ಕೆಯ್ಯೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಯಂತಿ ಎಸ್ ಭಂಡಾರಿ, ದಕ್ಷಿಣ ಕನ್ನಡ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷರಾದ ಸಹಜ್ ರೈ ಬಳಜ್ಜ, ಪಂಚಾಯತ್ ಸದಸ್ಯರಾದ ಶರತ್ ಕುಮಾರ್ ಮಾಡಾವು ಮತ್ತು ಇನ್ನಿತರ ಗಣ್ಯರು ಮಮತಾ ಅವರ ಮನೆಗೆ ಆಗಮಿಸಿ ಅರೋಗ್ಯ ವಿಚಾರಿಸಿದರು.

ವೈದ್ಯರ ಮಾತು 

ನಾಗರ ಹಾವು ಕಚ್ಚಿದ ತಕ್ಷಣ ಹಾವು ಕಚ್ಚಿದ ಜಾಗವನ್ನು ಗುರುತಿಸಿ ಅಲ್ಲಿರುವ ವಿಷ ತುಂಬಿದ ರಕ್ತವನ್ನು ತಕ್ಷಣ ಬಾಯಿಯಿಂದ ಚೀಪಿ ಹೊರಗೆ ಉಗಿಸುವುದು ಪ್ರಥಮ ಚಿಕಿತ್ಸೆಯಾದರೂ ಇದರಿಂದ ಹಾವು ಕಚ್ಚಿಸಿಕೊಂಡವರಿಂಗಿಂತ ವಿಷವನ್ನು ಬಾಯಲ್ಲಿ ಚೀಪಿದವರಿಗೆ ಆಗುವ ಅಪಾಯವೇ ಹೆಚ್ಚು. ಈ ಕಾರ್ಯವನ್ನು ಕೇವಲ ನುರಿತ ಅಥವಾ ಪರಿಣಿತಿ ಹೊಂದಿದವರು ಮಾತ್ರ ಮಾಡಬಹುದೇ ವಿನಃ ಎಲ್ಲರು ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಕಾರಣ ಇದೆ. ವೈದ್ಯರು ಹೇಳುವ ಪ್ರಕಾರ ಬಾಯಲ್ಲಿ ಯಾವುದಾದರು ಹುಣ್ಣು ಇದ್ದರೆ, ಅಥವಾ ಗಂಟಲಿನಲ್ಲಿ ಇಳಿದರೆ ಅಥವಾ ಹಲ್ಲು ನೋವಿದ್ದರೆ ಅಥವಾ ಹಲ್ಲಿನ ಒಸಡು ರಕ್ತ ಸೋರುತ್ತಿದ್ದರೆ ಹೀಗೆ ಬಾಯಿಯಿಂದ ಚೀಪಿದ ವಿಷ ನೇರವಾಗಿ ನಮ್ಮ ಶರೀರ ಸೇರಿ ವಿಷ ಹರಡುತ್ತದೆ. ರಕ್ತ ಪರಿಚಲನೆಯಲ್ಲಿ ಸೇರಿಕೊಂಡು ಬೇಗ ವಿಷ ಹಬ್ಬಿಕೊಂಡು ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಹಾವು ಕಚ್ಚಿಸಿಕೊಂಡವರಿಗಿಂತ ಮೊದಲು ವಿಷ ಹೀರಿಕೊಂಡವರು ಸಾಯುವ ಸಂಭವ ಹೆಚ್ಚು ಇರುತ್ತದೆ. ಹಾಗಾಗಿ ಇದು ಬಹಳ ಸೂಕ್ಷ್ಮವಾದ ಕಾರ್ಯವಾಗಿದ್ದು, ಇದರ ಬಗ್ಗೆ ಸರಿಯಾದ ಜ್ಞಾನವಿದ್ದರೆ ಮಾತ್ರ ಕ್ರಮ ಕೈಗೊಳ್ಳಿ.    

Read Also: ಈ ಕೀಟದ ಬೆಲೆ 1 ಕೋಟಿಗೂ ಅಧಿಕ! ಐಷಾರಾಮಿ ಕಾರು ಮನೆಗಳಿಗಿಂತ ದುಬಾರಿ!
Read Also: ಈ 6 ಹಣ್ಣುಗಳ ಸೇವನೆಯಿಂದ ದೇಹಕ್ಕೆ ಸಿಗುತ್ತದೆ ಅದ್ಭುತ ಪ್ರಯೋಜನಗಳು

 

 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio