heavy rains effect landslide in Mangalore
ಮಂಗಳೂರು:ಮಂಗಳೂರು ನಗರದ ಹೊರವಲಯದ ಮಲ್ಲೂರು ಜಂಕ್ಷನ್ ಬಳಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಹಾನಿಯಾಗಿದೆ.
ಘಟನೆಯಿಂದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಮಹಿಳೆಯನ್ನು ಬೀಪಾತುಮ್ಮ (72) ಎಂದು ಗುರುತಿಸಲಾಗಿದೆ. ಕರಾವಳಿ ಭಾಗದಲ್ಲಿ ಕಳೆದ ಕೆಲದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಕೂಡ ಬಿಡದೇ ಮಳೆ ಸುರಿದಿದೆ. ಇದರಿಂದ ಸೋಮವಾರ ಬೆಳಗ್ಗೆ 5.30ರ ವೇಳೆಗೆ ಮಲ್ಲೂರು ಜಂಕ್ಷನ್ ಸಮೀಪ ಝುಬೇರ್ ಎಂಬುವವರ ಮನೆಯ ಹಿಂಭಾಗವಿದ್ದ ಭಾರೀ ಗಾತ್ರದ ಗುಡ್ಡ ಕುಸಿದು ಬಿದ್ದಿದೆ.
ಇದರಿಂದ ಮನೆಯ ಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದ ಮಹಿಳೆಯೊಬ್ಬರ ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಮನೆಯಲ್ಲಿ ಒಬ್ಬರೇ ಇದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಝುಬೇರ್ ಕುಟುಂಬ ಇದೇ ಮನೆಯಲ್ಲಿ ವಾಸವಿದ್ದರು. ಭಾನುವಾರ ಅವರ ಕುಟುಂಬ ಪತ್ನಿ ಮನೆಗೆ ತೆರಳಿತ್ತು. ಇಲ್ಲದಿದ್ದರೆ ಗೋಡೆ ಕುಸಿತದಿಂದ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯ ಮುಖಂಡರಾಸ ಎನ್.ಇ. ಮಹಮ್ಮದ್ ತಿಳಿಸಿದ್ದಾರೆ.