ಸಾಧನೆ ಯಾರ ಪಾಲಿನ ಸ್ವತ್ತು ಅಲ್ಲ, ಯಶಸ್ಸು ಯಾರಿಗೂ ಅಷ್ಟು ಸುಲಭವಾಗಿ ಸಿಗುವ ಸಾಧನ ಅಲ್ಲ. ಕಠಿಣ ಪರಿಶ್ರಮ , ಸಂಯಮ , ಏಕಾಗ್ರತೆ, ಸತ್ಚಿತ್ತತೆ, ಇದ್ದರೆ ಮಾತ್ರ ಸಾಧನೆ ಮತ್ತು ಯಶಸ್ಸು ಒಬ್ಬರ ಪಾಲಾಗುತ್ತದೆ. ಅಂತಹ ಸಾಧಕರ ಪಟ್ಟಿಯಲ್ಲಿ ಯುವ ಬರಹಗಾರ, ಕಥೆಗಾರ, ಕವಿ, ನಟ, ನಿರ್ದೇಶಕ, ಹೀಗೆ ಕಲಾ ಜಗತ್ತಿನ ಎಲ್ಲಾ ಆಯಾಮಗಳಲ್ಲೂ ತನ್ನದೇ ಆದ ವಿಶೇಷ ಛಾಪು ಮೂಡಿಸಿರುವ ಪುತ್ತೂರು ತಾಲೂಕಿನ “ಸಾಯಿ ದೀಕ್ಷಿತ್ ಪುತ್ತೂರು” ಇಂದು ಕೂಲ್ – ಸಾಧಕರ ಕಾಲಂನಲ್ಲಿ.
ಇವರು ಕೆಯ್ಯೂರು ಗ್ರಾಮದ, ನೂಜಿ ಶ್ರೀ ಅಣ್ಣಿ ಪೂಜಾರಿ ಮತ್ತು ಶ್ರೀಮತಿ ಶೀಲಾವತಿ ದಂಪತಿಗಳ ಮೊದಲನೇ ಪುತ್ರ. 19 ಫೆಬ್ರವರಿ 1990ರಲ್ಲಿ ಪುತ್ತೂರು, ಆರ್ಯಾಪು ಗ್ರಾಮದ, ಸಂಪ್ಯ ಹೊಸಮನೆ ಎಂಬಲ್ಲಿ ಇವರು ಹುಟ್ಟಿದ್ದು. ಇವರದ್ದು, ಸಹೋದರ ದೀಪಕ್ ಅಮೀನ್ ಮತ್ತು ತಂಗಿ ದೀಪ್ತಿ ಚಂದ್ರಶೇಖರ್ ಹಾಗೂ ಪತ್ನಿ ಪವಿತ್ರ ಸುವರ್ಣ ಹಾಗೂ ಹೆತ್ತವರು ಇರುವ ಒಂದು ಸಣ್ಣ ಕುಟುಂಬ.
ಬಾಲ್ಯದಿಂದಲೇ ಕಷ್ಟಗಳನ್ನು ಕಂಡ ಇವರು ದೀಕ್ಷಿತ್ ಎಂಬ ಹೆಸರಿನ ಮುಂದೆ “ಸಾಯಿ” ಎಂಬ “ಬಾಬಾ”ರ ನಾಮಾಂಕಿತವನ್ನು ಸೇರಿಸಿ “ಸಾಯಿ ದೀಕ್ಷಿತ್” ಎಂಬ ಹೆಸರಿನಿಂದ ಜನರಿಂದ ಗುರುತಿಸಿಕೊಳ್ಳುತ್ತಿದ್ದಾರೆ.
ಇವರಿಗೆ ಕಥೆ, ಕವನಗಳನ್ನು ಬರೆಯುವುದು ಎಂದರೆ ಏನೋ ಹುಚ್ಚು. ಕುವೆಂಪು ಅವರ ಕವನಗಳನ್ನು ಹೆಚ್ಚಾಗಿ ಓದಿ ಮನದಲ್ಲಿರಿಸಿಕೊಂಡು ಅನುಭವಗಳನ್ನು ಕಲಿತವರು. ಕುವೆಂಪು ಅವರ “ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ” ಅನ್ನೋ ಕವನ ಇವರಿಗೆ ತುಂಬಾ ಇಷ್ಟ. ಏಳನೇ ತರಗತಿಯಿಂದ ಕವನ ಬರೆಯಲು ಪ್ರಾರಂಭ. ಇವರು ಬರೆಯುವ ಕಲೆಯಿಂದ ಇವತ್ತು ಒಬ್ಬ ನಟ, ನಿರ್ದೇಶಕನಾಗಿದ್ದಾರೆ. ಮೊದಲಾಗಿ ನಾಟಕ ರಚನೆ ಮಾಡಿ, ನಂತರ ಕಥೆಗಳನ್ನು ಬರೆಯಲು ಪ್ರಾರಂಭಿಸುತ್ತಾರೆ. ಇವರ ಬರೆಯುವ ಕಲೆ ಇಂದು ದೊಡ್ಡ ಮಟ್ಟಕ್ಕೆ ಬರೆಯುವಂತೆ ಮಾಡಿದೆ. ಇವರು ಪ್ರತಿಲಿಪಿಯ ಸಾಹಿತಿಯಾಗಿದ್ದು, ಇವರು ಪ್ರತಿಲಿಪಿಯಲ್ಲಿ ಬರೆದ “ಶೃಂಗಾರ”, “ಅವಳು”, “ಅವಳ ನಗು” ಮತ್ತು “ನಾಳೆಯಿಂದ” ಅನ್ನೋ ಕಥೆಗಳು ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಈ ಎಲ್ಲಾ ಕಥೆಗಳಿಗೆ ಫೇಸ್ಬುಕ್, ವಾಟ್ಸ್ಯಾಪ್,ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲಾತಾಣಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರು ಇವರ ವಿದ್ಯಾಭ್ಯಾಸ 1ರಿಂದ 4ನೇ ತರಗತಿಯವರೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಳಂದೂರಿನಲ್ಲಿ ಆರಂಭವಾಗಿ, 5ರಿಂದ 7ನೇ ತರಗತಿ ಸರಕಾರಿ ಶಾಲೆ ಆರ್ಯಾಪು ಮತ್ತು 8ರಿಂದ 10ನೇ ತರಗತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಬ ಮತ್ತು ಪದವಿ ಪೂರ್ವ ವಿದ್ಯಾಭ್ಯಾಸ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು, ಪುತ್ತೂರು ಇಲ್ಲಿ ಮುಗಿಸಿ, ಐಟಿಐ ಅನ್ನು ಮಂಜುಷಾ ಐಟಿಐ ಇಲ್ಲಿ ಮುಗಿಸಿದ್ದಾರೆ. ನಂತರ ಒಂದು ವರ್ಷ ಬೆಂಗಳೂರು, 2ವರ್ಷ ಮಂಗಳೂರಿನಲ್ಲಿ, 1ವರ್ಷ ಶಿವಮೊಗ್ಗದಲ್ಲಿ, 1ವರ್ಷ ಉಡುಪಿ,ಕುಂದಾಪುರದಲ್ಲಿ ಐ.ಎಫ್.ಬಿ ಕಂಪನಿಯಲ್ಲಿ ಕೆಲಸದ ಅನುಭವ ಪಡೆದಿದ್ದಾರೆ. ಮತ್ತು ಜಿಮ್ ಟ್ರೈನರ್ ಆಗಿಯೂ 5 ವರುಷಗಳ ಕಾಲ ದುಡಿದಿದ್ದಾರೆ. ಪ್ರಸ್ತುತ ಹಿಂದುಸ್ತಾನ್ ಯುನಿಲಿವರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಜೊತೆಗೆ ಕಲಾರಂಗದಲ್ಲಿ ಮಿಂಚುತ್ತಿದ್ದಾರೆ.
Read Also : ಯೂಟ್ಯೂಬರ್ ಪುತ್ತೂರಿನ ಜಯಂತ್ ಕುಲಾಲ್
Read Also : ಅಭಿನವ ವಜ್ರಮುನಿ’ ರಮೇಶ್ ರೈ ಕುಕ್ಕುವಳ್ಳಿ
Read Also : “ಮುದ್ದು ಲಕ್ಷ್ಮೀ ಯ ಗಂಡ ಡಾ.ಧ್ರುವಂತ್ ” ರ ಸಾಧನೆಯ ಹಾದಿ
Read Also : ”ತುಳುವ ಸಿರಿ” ‘ಎಂ. ಅಧ್ವಿಕಾ ಶೆಟ್ಟಿ” ಯವರ ಸಾಧನೆಯ ಹಾದಿ
“ಕಷ್ಟ ಇದ್ರೇನೆ ಜೀವನದಲ್ಲಿ ಪಾಠ ಕಲಿಯೋದು” ಅನ್ನೋದು ಇವರ ಅನುಭವದ ಮಾತು. ಇವರ ತಂದೆಯ ಊರು ಕಾಣಿಯೂರು ಚಾರ್ವಾಕದ ಕಳಂಗಜೆ. ತಂದೆಯ ಮನೆಯು ತುಂಬಾ ಕಷ್ಟಗಳಿಂದ ಕೂಡಿದ್ದರಿಂದ ಇವರು ಮತ್ತು ಇವರ ತಮ್ಮ ಬಾಲ್ಯದಿಂದಲೇ ತಂದೆ ತಾಯಿಯಿಂದ ದೂರ ಉಳಿಯಬೇಕಾಯಿತು. ಅಂದರೆ, ಅಂಗನವಾಡಿ ಕಲಿಕೆಯಿಂದಲೇ ತನ್ನ ತಾಯಿಯ ಅಕ್ಕ ಅಂದರೆ, ದೊಡ್ಡಮ್ಮನ ಮನೆಯಲ್ಲಿ ಬೆಳೆಯುತ್ತಾರೆ. ಒಂದು ಮಗು ತಾಯಿಯ ನೆರಳಿಲ್ಲದೆ ಬದುಕುವುದೆಂದರೆ ಅದರಷ್ಟು ಹಿಂಸೆ ಬೇರಾವುದೂ ಇಲ್ಲ. ಆದರೂ, ಇವರ ದೊಡ್ಡಮ್ಮ ಮತ್ತು ದೊಡ್ಡಪ್ಪ ಜೋತೆಗೆ ಅಣ್ಣ ಅಕ್ಕಂದಿರು ತಮ್ಮಂದಿರು ಪ್ರೀತಿಯಿಂದ ಸಾಕುತ್ತಾರೆ. ನಾಲ್ಕನೇ ತರಗತಿಯವರೆಗೆ ಇವರ ಸಂತೋಷ ದುಃಖ ಏನೇ ಇದ್ದರೂ ದೊಡ್ಡಮ್ಮ ದೊಡ್ಡಪ್ಪನಲ್ಲಿಯೇ ಕಳೆದುಹೋಗಿತ್ತು. ಇವರು ಐದನೇ ತರಗತಿಗೆ ಬರುವಾಗ ತಂದೆ ತಾಯಿಗೂ ಕೂಡ ತಂದೆಯ ಮನೆಯಲ್ಲಿ ಜಾಗವಿಲ್ಲದಾಗಿತ್ತು. ಆಗ ತಾಯಿಗೆ ಉಳಿದಿದ್ದು ತವರು ಮನೆ ಮಾತ್ರ. ಆ ಸಂದರ್ಭದಲ್ಲಿ ತಂದೆ ಮತ್ತು ತಾಯಿ ಗಂಟುಮೂಟೆ ಕಟ್ಟಿಕೊಂಡು ತಾಯಿ ಮನೆಗೆ ಬರುತ್ತಾರೆ. ತಾಯಿ ಮನೆಯವರು ಕೃಷಿಕರು ಮತ್ತು ಕೃಷಿ ಜಾಗ ಇದ್ದುದರಿಂದ ಅಜ್ಜ ಮತ್ತು ಮಾವಂದಿರು “ನೀನು ಎಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ. ಇಲ್ಲಿಯೇ ಇರು” ಎಂದು ಪಾಲಿನಲ್ಲಿ ಇವರಿಗೆ ಸಿಗಬೇಕಾದ ಆಸ್ತಿಯನ್ನು ನೀಡಿ ಚಿಕ್ಕದಾದ ಮನೆಯನ್ನು ಕಟ್ಟಿ ಕೊಡುತ್ತಾರೆ. ಈ ಮನೆ ಆದ ನಂತರ ದೊಡ್ಡಮ್ಮನ ಮನೆಯಲ್ಲಿ ಇದ್ದ ಇವರನ್ನೂ ಕೂಡ ಹೊಸ ಮನೆಗೆ ಕರೆದುಕೊಂಡು ಬರುತ್ತಾರೆ. ಐದನೇ ತರಗತಿಯಿಂದ ಏಳನೇ ತರಗತಿಯವರೆಗೆ ಇಲ್ಲೇ ಕಲಿಕೆಯನ್ನು ಆರಂಭಿಸುತ್ತಾರೆ. ಭಾನುವಾರ ಬಂತೆಂದರೆ ತಂದೆ ತಾಯಿಯ ಜೊತೆ ಕೂಲಿ ಕೆಲಸಕ್ಕೆ ಹೋಗಿ ಶಿಕ್ಷಣಕ್ಕೆ ಬೇಕಾದ ಒಂದಿಷ್ಟು ಖರ್ಚುಗಳನ್ನು ಮಾಡಿಕೊಳ್ಳುತ್ತಿದ್ದರು. ಏಳನೇ ತರಗತಿ ಮುಗಿದ ನಂತರ ಎಲ್ಲರೂ “ಇನ್ನು ಶಿಕ್ಷಣ ಸಾಕು ಕೆಲಸಕ್ಕೆ ಹೋಗ್ಲಿ ” ಅಂದ್ರು. ಆದರೆ, ತಾಯಿ ತನ್ನ ತಾಳಿಯನ್ನು ಅಡವಿಟ್ಟು ದೂರದ ಊರಾದ ಕಡಬದಲ್ಲಿ ಸರ್ಕಾರಿ ಹಾಸ್ಟೆಲ್ ಒಂದಕ್ಕೆ ಸೇರಿಸಿ ಅಲ್ಲಿಂದ ಹಾಸ್ಟೇಲ್ ಕಿರುಕುಳಗಳನ್ನು ಅನುಭವಿಸುತ್ತಾ ತಾಯಿ ತಂದೆಯರ ನೆನಪುಗಳನ್ನು ಬಚ್ಚಿಡುತ್ತಾ, ಅಲ್ಲಿಯೂ ವಾರದ ರಜೆಗೆ ಕೆಲಸಕ್ಕೆ ಹೋಗಿ ಹತ್ತನೇ ತರಗತಿಯನ್ನು ಉತ್ತಮ ತೇರ್ಗಡೆಯೊಂದಿಗೆ ಉತ್ತೀರ್ಣರಾಗುತ್ತಾರೆ.
ಅಲ್ಲಿಂದ ಮತ್ತೆ ಮನೆಗೆ ಬಂದಾಗ ಇನ್ನು ವಿದ್ಯಾಭ್ಯಾಸ ಸಾಕು ಎಂದು ಹೇಳುವಾಗ, ಇವರು ನನಗೆ ಇನ್ನೂ ಕಲಿಬೇಕು ಅಂತ ಹಠತೊಟ್ಟರು. ಆಗ ಮತ್ತೆ ತಾಯಿ ಬಿಡಿಸಿದ್ದ ತಾಳಿಯನ್ನು ಅಡವಿಟ್ಟು ಓದುವಂತೆ ಹೇಳುತ್ತಾರೆ. ಆಗ ಇವರಿಗೆ ಇಷ್ಟವಾದ ವಿಜ್ಞಾನ ವಿಭಾಗವನ್ನು ಆರಿಸಿಕೊಂಡು, ಓದುವುದರ ಜೊತೆಗೆ ಕೂಲಿ ಮಾಡಿಕೊಂಡು ಉತ್ತಮ ರಾಂಕ್ ಪಡೆದುಕೊಂಡು ಉನ್ನತ ಶಿಕ್ಷಣದ ಕಡೆಗೆ ಹೆಜ್ಜೆ ಇಡುತ್ತಾರೆ. ತಾನು ಇಂಜಿನಿಯರಿಂಗ್ ಮಾಡಬೇಕು ಎಂಬ ಕನಸು ಕಟ್ಟಿಕೊಂಡರಾದರೂ ಆರ್ಥಿಕವಾಗಿ ಬಲಿಷ್ಠರಾಗಿಲ್ಲದೆ ಮತ್ತು ಯಾರೊಬ್ಬರ ಸಹಾಯ ಹಸ್ತವೂ ಸಿಗದ ಕಾರಣ, ಬ್ಯಾಂಕ್ ಸಾಲಗಳ ಮೊರೆಹೋಗಿ, ಸ್ವಂತ ಆಸ್ತಿ ಮತ್ತು ಒಡವೆಗಳು ಏನೂ ಇರದ ಕಾರಣ ವಿದ್ಯಾಭ್ಯಾಸದ ಗುರಿಯ ಕನಸು ಅಲ್ಲಿಗೆ ನಾಶವಾಯಿತಾದರೂ ಮುಂದೆ ಒಂದು ಪ್ರೈವೇಟ್ ಐಟಿಐಯಲ್ಲಿ ಪ್ರಾಕ್ಟಿಕಲ್ ಎಲೆಕ್ಟ್ರಾನಿಕ್ಸ್ ಆಂಡ್ ಎಲೆಕ್ಟ್ರಿಕಲ್ ಓದುತ್ತಾರೆ. ಅಲ್ಲಿ ಓದುತ್ತಿರುವಾಗಲೇ ಅಷ್ಟರವರೆಗೆ ಕರೆಂಟೇ ಇಲ್ಲದ ಮನೆಗೆ ಇವರು ಕಲಿತವಿದ್ಯೆಯಿಂದಲೇ ತಮ್ಮ ಮತ್ತು ಇವರು ವೈರಿಂಗ್ ಮಾಡುತ್ತಾರೆ. ಇಲ್ಲಿಂದ ಇವರ ಕೆಲಸ ಶುರುವಾಯಿತು. ಅಷ್ಟರಲ್ಲಿ ಬೆಂಗಳೂರಿನ ಕಂಪೆನಿಗೆ ಆಹ್ವಾನ ಬಂತು, ಅಲ್ಲಿ ಹೋಗಿ ವಾಷಿಂಗ್ ಮೆಷಿನ್ ಸರ್ವಿಸ್ ಇಂಜಿನಿಯರ್ ಆಗಿ ಒಂದು ವರುಷಗಳ ಕಾಲ ದುಡಿಯುತ್ತಾರೆ. ಅಲ್ಲಿಂದ ನಂತರ ಕರ್ನಾಟಕದ ಬೇರೆಬೇರೆ ಕಡೆಗಳಲ್ಲಿ ದುಡಿಯುತ್ತಾರೆ. ನಂತರ ಮೊದಲೇ ಬಾಲ್ಯದಿಂದಲೂ ಗೀಚುತ್ತಿರುವ ಹವ್ಯಾಸವಾದ ಕಥೆ ಕವನ, ಅಂತ ಒಂದೊಂದಾಗಿ ನಟನೆಯ ಕೌಶಲ್ಯವನ್ನು ಹಚ್ಚಿಕೊಂಡು ಅದರ ಹಿಂದೆ ಮುನ್ನಡೆಯುತ್ತಿದ್ದಾರೆ.
ಇವರು ಮೊದಲು ನಟನೆ ಮಾಡಿದ್ದು “ಅಡಿಕ್ಟ್” ಎಂಬ ಟೆಲಿಚಿತ್ರದಲ್ಲಿ, ಅದಕ್ಕಿಂತ ಮೊದಲು ಬಣ್ಣ ಹಚ್ಚಿದ್ದು ತುಳು ನಾಟಕ “ನನ ಏರ್ ಉಲ್ಲೆರ್” ಪ್ರಸ್ತುತ ಧರಿತ್ರಿ ಕಲಾವಿದರು ಕುಡ್ಲ ನಾಟಕ ಸಂಸ್ಥೆಯಲ್ಲಿ. ಅದರೊಂದಿಗೆ ನಾಲ್ಕೈದು ಟ್ಯಾಬ್ಲೋಗಳಲ್ಲಿ ಬಣ್ಣ ಹಚ್ಚಿ ಜನರ ಮೆಚ್ಚುಗೆಗಳಿಸಿದ್ದು ದಯಾನಂದ ಕುಂತೂರು ಇವರ ಸಂಸ್ಥೆಯಲ್ಲಿ. ಅದರ ನಂತರ ಪ್ರಸ್ತುತ ಸಂಸಾರ ಕಲಾವಿದರು ಪುತ್ತೂರು ಇದರಲ್ಲಿ “ಮಗೆ ಮಲ್ಲಾಯೆ” ಎಂಬ ತುಳು ನಾಟಕದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು. ಮುಂದಿನ ದಿನಗಳಲ್ಲಿ ಕಿರುಚಿತ್ರಗಳಾದ “ತರ್ಕ” ಚಿತ್ರದ ಸಂಭಾಷಣೆಯನ್ನು ಬರೆದು ಹಾಗೋ ಹೀಗೋ ಕಷ್ಟ ಪಟ್ಟಾಗ ಸಿಕ್ಕಿದ್ದು “ಶಟರ್ದುಲಾಯಿ” ತುಳು ಚಲನಚಿತ್ರದಲ್ಲಿ ಚಿಕ್ಕಪಾತ್ರ. ಅದರ ಬಳಿಕ “ಅರೆಮರ್ಲೆರ್” ತುಳು ಚಲನಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಮತ್ತು “ಜೀವನ ಯಜ್ಞ” ಕನ್ನಡ ಚಲನಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. “ಪಿರ್ಕಿಲು” ಎಂಬ ಚಿತ್ರ ಇನ್ನು ತೆರೆಕಾಣಬೇಕಿದೆ.
ಅಷ್ಟೇ ಅಲ್ಲದೇ ಸಾಹಿತ್ಯ ಲೋಕದಲ್ಲಿ ಹೆಜ್ಜೆ ಹಾಕಿ “ಜಿದ್ದು” ಕನ್ನಡ ಟೆಲಿ ಚಿತ್ರಕ್ಕೆ ಯತೀಶ್ ಪೂಜಾರಿ ಇವರ ಅವಕಾಶದಲ್ಲಿ 3 ಹಾಡು ಬರೆದಿದ್ದಾರೆ. ಆ ಮೂರು ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ. “ಅಮ್ಮು” ಆಲ್ಬಾಮ್ ಹಾಡು ಸುರೇಂದ್ರ ಪಣಿಯೂರು ನಿರ್ದೇಶನದ ಸಾಯಿ ದೀಕ್ಷಿತ್ ಇವರ ಸಾಹಿತ್ಯ ಮತ್ತು ಸುಶ್ಮಿತಾ ಪಾಟಾಲಿ ಇವರ ಕಂಠಸಿರಿಯಲ್ಲಿ ಮೂಡಿಬಂದಿದೆ.
ನಂತರ “ಕಾಳಿ” ಎಂಬ ಬಹು ಬಡ್ಜೆಟ್ನ ಸುಷ್ಮಾ ಪೂಜಾರಿ ಇವರ ಕಿರುಚಿತ್ರಕ್ಕೆ ಇವರದ್ದೇ ಕಥೆ, ಸಂಭಾಷಣೆ ಮತ್ತು ಖಳನಾಯಕ ನಟನೆ. ಇದರ ಜೊತೆಗೆ “ಗುಬ್ಬಚ್ಚಿ” ಅನ್ನೋ ಟೆಲಿ ಚಿತ್ರವನ್ನು ಇವರೇ ಕಥೆ,ಸಂಭಾಷಣೆ ಮತ್ತು ಸಾಹಿತ್ಯ ಬರೆದು ನಿರ್ದೇಶಿಸುತ್ತಿದ್ದಾರೆ. ಇದರ ಜೊತೆಗೆ ಯತೀಶ್ ಪೂಜಾರಿ ನಿರ್ದೇಶನದ “ಸರಕಾರಿ ಶಾಲೆ ಕರಂಬಾರು” ಕನ್ನಡ ಮಕ್ಕಳ ಚಲನಚಿತ್ರಕ್ಕೆ ಕಥೆಯನ್ನು ಹೆಣೆದಿದ್ದಾರೆ.
ಇವರಿಗೆ ನಟನೆ ಒಂದು ದೊಡ್ಡ ಸವಾಲಾಗಿತ್ತು. ಹೋದಲ್ಲೆಲ್ಲಾ ಇವರ ತಿರಸ್ಕಾರವಾದಾಗ ಹಲವಾರು ಜನರ ಜೊತೆ ಒಂದು ನಾಟಕ ತಂಡ ಮಾಡಬೇಕು ಎಂದು ಕೇಳಿಕೊಂಡರು. ಆಗ ಇವರಿಗೆ ಎಲ್ಲರಿಂದಲೂ ಅವಮಾನ ಆಯಿತು. ನಿನ್ನಿಂದ ಇದೆಲ್ಲಾ ಸಾಧ್ಯವಿಲ್ಲ ಎಂಬ ಮಾತುಗಳು ಕೂಡ ಬಂತು. ಇವರು ಇವರ ಧೈರ್ಯವನ್ನು ಕೈಬಿಡದೆ ಸ್ವತಃ ಖರ್ಚುವೆಚ್ಚಗಳನ್ನು ಬರಿಸಿ “ಸಾಯಿ ಶೃಂಗಾರ” ಎಂಬ ನಾಟಕ ತಂಡವನ್ನು ಕಟ್ಟುತ್ತಾರೆ. ಈ ತಂಡದಲ್ಲಿ ಶಿವಕುಮಾರ್ ರೈ ಬರೆದ “ಈರ್ ಏರ್ಂಬೆರೆ” ಮತ್ತು ಮೋಹನ್ ದಾಸ್ ಕೊಟ್ಟಾರಿ ಬರೆದ “ಮೋಕೆ ಒಂತೆ ಜೋಕೆ” ಎಂಬ ನಾಟಕಗಳನ್ನು ಪ್ರದರ್ಶಿಸಿ ಸಕ್ಸಸ್ ಕಂಡು ಜೊತೆಗೆ “ಸಾಯಿ ಕಲಾವಿದರು ಕುಡ್ಲ” ನಾಟಕ ತಂಡದಲ್ಲಿ “ಲಿಂಕ್ ಲಿಂಗಪ್ಪೆ” ಎಂಬ ನಾಟಕದಲ್ಲಿ ಹೆಸರುಗಳಿಸಿದರು. ಆದರೆ, ಇವರ ಬೆಳವಣಿಗೆ ಕಂಡು ಇವರ ತಂಡಕ್ಕೆ ಮತ್ತು ಇವರ ಮೇಲೆ ವಕ್ರದೃಷ್ಟಿ ಬಿದ್ದು ತನ್ನ ನಾಟಕ ತಂಡ ತನ್ನವರಿಂದಲೇ ಒಡೆದು ಹೋಗುತ್ತದೆ. ಇದರಿಂದ ಬೇಸರಗೊಂಡಾಗ ಇವರ ಪಾಲಿಗೆ ಒಲಿದಿದ್ದು “ಬಲೆತೆಲಿಪಾಲೆ” ಕಾರ್ಯಕ್ರಮ. ಇವರು “ನಮ್ಮ ಟಿವಿ” ಚಾನೆಲ್ನಲ್ಲಿ ಪ್ರಸಾರವಾಗುವ “ಬಲೆತೆಲಿಪಾಲೆ” ಸೀಸನ್ 7ರಲ್ಲಿ ಇವರ ಸಾರಥ್ಯದಲ್ಲಿ “ಸಾಯಿ ಶೃಂಗಾರ” ಎಂಬ ತಂಡವನ್ನು ಕಟ್ಟಿಕೊಂಡು ಫೈನಲ್ನಲ್ಲಿ ಮಿಂಚಿ 7ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದು ಇವರ ಶ್ರಮ, ಮಾನವೀಯತೆ ಮತ್ತು ಕಲೆಗೆ ಸಿಕ್ಕ ಉಡುಗೊರೆ ಮತ್ತು ಇವರನ್ನು ಇನ್ನಷ್ಟು ಎತ್ತರಕ್ಕೆ ಏರಿಸಿತು. ನಂತರ ಡೈಜಿವರ್ಲ್ಡ್ ಚಾನೆಲ್ ನಲ್ಲಿ ಇವರ ಮಕ್ಕರ್ ಕಾಮಿಡಿ ಪ್ರದರ್ಶನವಾಗಿದ್ದು ಮೊದಲಬಾರಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದಾರೆ. ಹಾಗೆಯೇ “ಮಕ್ಕರ್” ಎಂಬ ತಂಡವನ್ನು ಕಟ್ಟಿಕೊಂಡು ಯಶಸ್ವಿಯಾಗಿ ಕಾಮೆಡಿ ಶೋ ನಡೆಸುತ್ತಿದ್ದಾರೆ. ಈ ಯಶಸ್ಸಿನ ಜೊತೆ ಇವರ ಆತ್ಮೀಯ ಮಿತ್ರರಾದ ರಂಜು ರೈ ಸುಳ್ಯ, ಅನಿಲ್ ರೈ ಪೆರಿಗೇರಿ ಹಾಗೂ ಜ್ಯೋತಿ ಕುಲಾಲ್ ಇವರೆಲ್ಲಾ ಜೊತೆಯಾಗಿದ್ದಾರೆ. ಜೊತೆಗೆ ರವಿರಾಮಕುಂಜ, ಪ್ರವೀಣ್ ಅಂಚನ್ ಕಣಿಯಾರು ಹಾಗೂ ನವೀನ್ ರೈ ಬೆಟ್ಟಂಪಾಡಿ ಇವರು ಮುಖ್ಯ ಕಾರಣ ಕರ್ತ್ರುಗಳಾಗಿದ್ದಾರೆ. ಈಗ ಡೈಜಿವರ್ಲ್ಡ್ ಚಾನೆಲ್ ನಲ್ಲೂ ತಮ್ಮ ಕಾಮಿಡಿ ಕಮಾಲ್ ನೀಡಲು ರೆಡಿಯಾಗಿದೆ.
ಈಗಾಗಲೇ ಬಿಡುಗಡೆಗೊಂಡಿರುವ “ಗರ್ವ” ಟೆಲಿಚಿತ್ರದ ನಿರ್ದೇಶನ ಹರ್ಷಿತ್ ಸೋಮೇಶ್ವರ ಮತ್ತು ಸಂಜು ಸಿರಿಯಾನ್ ಬರೆದಿರುವ ಕಥೆಗೆ ಇವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಟಾಕೀಸ್ ಆಫ್ ನಲ್ಲಿ ತೆರೆಕಂಡಿದೆ. ಅಲ್ಲದೆ ಮಾಣಿಕ್ಷ ಸುಷ್ಮಾ ಪೂಜಾರಿ ನಿರ್ಮಾಣದ ಅರಸೆ ಕಥಾ ಸಂಪುಟ ಗೀತೆಯ ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ನಿರ್ದೇಶನ ಕೂಡ ಇವರದ್ದೇ. ಇವರು ಕೇವಲ ನಟನೆ ಮತ್ತು ಬರವಣಿಗೆಗೆ ಸೀಮಿತವಾಗದೆ ಹುಟ್ಟು ಹಬ್ಬ ಹಾಗೂ ಇತರೆ ಸನ್ಮಾನ ಕಾರ್ಯಕ್ರಮಗಳ ನಿರೂಪಣೆಯನ್ನು ಕೂಡ ಮಾಡಿದ್ದಾರೆ.
ಈಗ ಮಕ್ಕರ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ಓಪನ್ ಮಾಡಿ ಅದರಲ್ಲಿ ಹಲವಾರು ಕಾಮಿಡಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ದಾರಿ ತಪ್ಪಿಸಿದ ಹೊಗೆ, ಕಲಾವಿದೆ ಮತ್ತು ಕೊರೋನಾ ಕಂಗಾಲ್ ಇದರಲ್ಲಿ ಬಿಡುಗಡೆಗೊಂಡ ಕಾಮಿಡಿಗಳು. ಇವರ ಈ ಎಲ್ಲಾ ಸಾಧನೆಗಳಿಗೊಂದು ಸಲಾಮ್ ಹೇಳಬೇಕು .ಇವರ ಸಾಧನೆಗಳನ್ನು ಇನ್ನೂ ಹೆಚ್ಚು ಜನರು ಗುರುತಿಸುವಂತಾಗಬೇಕು. ನಮ್ಮ ತುಳುನಾಡಿನ ಕಲಾವಿದರು ನಮ್ಮ ಹೆಮ್ಮೆ. ಕಷ್ಟಗಳಿಂದ ಮೇಲೆ ಬರುತ್ತಿರುವ ಛಲ ಸಾಯಿ ದೀಕ್ಷಿತ್ ಅವರದ್ದು. ಇವರ ಪ್ರತಿಭೆಯನ್ನು ಇಡೀ ದೇಶವೇ ಹೊಗಳಬೇಕು ಅನ್ನೋ ಆಸೆ ನನ್ನದು.
ನಿಮ್ಮೆಲ್ಲರ ಸಹಕಾರ ಇವರ ಮೇಲಿರಲಿ, ಇವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸೋಣ.
ಬರಹ: ರಂಜನಿ ಬಂಗೇರ – ಹವ್ಯಾಸಿ ಬರಹಗಾರರು ಕಳಂಗಜೆ
Tags – Cool-Achievers, Film, Kannada movie, Short films, Tulu Films, Story, Kannada Story, Pratilipi, India, Puttur, Karnataka
2 thoughts on “ಪುತ್ತೂರಿನ ಯುವ ಉತ್ಸಾಹಿ ಬರಹಗಾರ, ಕಥೆಗಾರ, ಸಿನಿಮಾ ನಟ “ಸಾಯಿ ದೀಕ್ಷಿತ್ ಪುತ್ತೂರು” ಇವರ ಸಾಧನೆಯ ಹಾದಿ.”